ರಾಯಚೂರು:ಪಿಎಸ್‍ಐ ಜಗದೀಶ ಹತ್ಯೆಗೈದಿದ್ದ ಹಂತಕರು ಕದ್ದೊಯ್ದಿದ್ದ ಜಗದೀಶ್ ಅವರ ಸರ್ವಿಸ್ ರಿವಾಲ್ವರ್ ಮಂತ್ರಾಲಯದಲ್ಲಿ ಪತ್ತೆಯಾಗಿವೆ.
ಆರೋಪಿಗಳಾದ ಮಧು ಮತ್ತು ಹರೀಶ್ ಬಾಬು ತಾವು ಮಂತ್ರಾಲಯದಲ್ಲಿ ತಂಗಿದ್ದಾಗಿ ಬಾಯ್ಬಿಟ್ಟಿದ್ದರು. ನಿನ್ನೆ ರಾತ್ರಿ ಆರೋಪಿಗಳನ್ನು ಮಂತ್ರಾಲಯದ ಖಾಸಗಿ ವಸತಿ ನಿಲಯ ಶ್ರೀಕಾರ ಲಾಡ್ಜ್‌ಗೆ ಕರೆ ತಂದ ಪೊಲೀಸರು ಪರಿಶೀಲನೆ ನಡೆಸಿದಾಗ ಟಾಯ್ಲೆಟ್ ಸೆಪ್ಟಿಕ್ ಟ್ಯಾಂಕ್ ನಲ್ಲಿ ಪಿಸ್ತೂಲ್ ಹಾಗೂ 5 ಗುಂಡುಗಳು ಪತ್ತೆಯಾಗಿದೆ.
ಅಕ್ಟೋಬರ್ 16 ಜಗದೀಶ್ ಹತ್ಯೆ ನಡೆಸಿದ್ದ ಆರೋಪಿಗಳು ಅದಾದ ಎರಡು ದಿನಗಳ ಬಳಿಕ ಅಂದರೆ ಅಕ್ಟೋಬರ್ 18 ರಂದು ಮಂತ್ರಾಲಯಕ್ಕೆ ಬಂದು ಶ್ರೀಕಾರ ಲಾಡ್ಜ್‌ನಲ್ಲಿ ತಂಗಿದ್ದರು. ಸುಮಾರು ಮೂರು ಗಂಟೆಗಳ ಕಾಲ ಮಂತ್ರಾಲಯದಲ್ಲಿ ತನಿಖೆ ನಡೆಸಿ ಆರೋಪಿಗಳನ್ನು ಈಗ ಕರ್ನೂಲ್‌ಗೆ ಕರದೊಯ್ಯಲಾಗಿದೆ.
ಮಂತ್ರಾಲಯದ ಹಲವು ಲಾಡ್ಜ್‌ಗಳಲ್ಲಿ ಫೋಟೋ ಐಡಿ ಪಡೆಯದೇ ರೂಮ್ ಮಂಜೂರು ಮಾಡುತ್ತಿರುವುದು ಬೆಳಕಿಗೆ ಬಂದಿದ್ದು, ಪವಿತ್ರ ಸ್ಥಳ ಆರೋಪಿಗಳ ಅಡಗುತಾಣವಾಗಿ ಬದಲಾಗುತ್ತಿದೆ. ಹೀಗಾಗಿ ರೂಮ್ ಪಡೆಯಲು ಬರುವವರಿಗೆ ಫೋಟೋ ಐಡಿ ಕಡ್ಡಾಯಗೊಳಿಸಿ ಎಂದು ಭಕ್ತರು ಪೊಲೀಸರಿಗೆ ಮನವಿ ಮಾಡಿದ್ದಾರೆ.