ಬೆಂಗಳೂರು : ಆರ್ಕಿಡ್ ಹೂವಿನ ಶ್ರೀಮಂತ ಸೊಬಗು ನೋಡುವುದೇ ಒಂದು ಮನೋಲ್ಲಾಸ. ಒಂದೇ ಒಂದು ಆರ್ಕಿಡ್ ಹೂವು ಕಂಡರೆ ಸಾಕು ಮನಸ್ಸು ಉಲ್ಲಸಿತಗೊಳ್ಳುತ್ತದೆ. ಹಾಗಿರುವಾಗ ನೂರಾರು ಬಣ್ಣ ಮತ್ತು ಹಲವು ವಿನ್ಯಾಸದ ಆಕರ್ಷಕ ಆರ್ಕಿಡ್‍ಗಳು ಒಂದೇ ಸೂರಿನಡಿ ಕಂಡರೆ? ಹೌದು. ಇಂತಹ ಆರ್ಕಿಡ್ ಸೊಬಗನ್ನು ಲಾಲ್‍ಬಾಗ್‍ನಲ್ಲಿ ನೋಡುಗರಿಗೆ ಉಣಬಡಿಸಲಾಗುತ್ತಿದೆ. ಅ.31 ಹಾಗೂ ನವೆಂಬರ್ 1ರಂದು ಲಾಲ್‍ಬಾಗ್‍ನಲ್ಲಿ ಬಗೆಬಗೆಯ ಆರ್ಕಿಡ್ ಪುಷ್ಪಗಳು ಲಗ್ಗೆ ಇಡುತ್ತಿವೆ. ದಿ ಆರ್ಕಿಡ್ ಸೊಸೈಟಿ ಆಫ್ ಕರ್ನಾಟಕ ಸಂಘಟನೆ ಲಾಲ್‍ಬಾಗ್‍ನ ಡಾ.ಎಂ.ಎಚ್. ಮರಿಗೌಡಹಾಲ್‍ನಲ್ಲಿ ಅ.31ರಿಂದ ನವೆಂಬರ್ 1ರವರೆಗೆ 2 ದಿನಗಳ ಕಾಲ ಆರ್ಕಿಡ್ ಪುಷ್ಪಮೇಳವನ್ನು ಆಯೋಜಿಸಿದೆ. ಆರ್ಕಿಡ್ ಬೆಳೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಹಾಗೂ ಬೆಳೆಯ ಬಗ್ಗೆ ಉತ್ತೇಜನ ನೀಡುವುದು ಮೇಳದ ಉದ್ದೇಶ.
ಬೆಳಗ್ಗೆ ಹಾಗೂ ಮಧ್ಯಾಹ್ನ ಸೇರಿ ಒಟ್ಟುಎರಡು ದಿನ ಒಟ್ಟು 4 ಕಾರ್ಯಾಗಾರಗಳುನಡೆಯಲಿವೆ.
ಏನು ವೈಶಿಷ್ಟ್ಯ?: ಕ್ಯಾಟ್ಲೆಯಾ, ಡೆಂಟ್ರೋಬಿಯಂ, ಪ್ಯಾಪಿಲೋ ಪೀಡಿಯಂ, ವೊಕಾರಾ- ಹೀಗೆ ಹತ್ತಾರು ಬಗೆಯ ಕಾಡಿನ ಪುಷ್ಪಗಳು ಹಾಗೂ ಹೈಬ್ರಿಡ್ ಆರ್ಕಿಡ್ ಪುಷ್ಪಗಳ ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿರುತ್ತವೆ, ನೃತ್ಯ ಭಂಗಿ ಹೋಲುವ ಡ್ಯಾನ್ಸಿಂಗ್ ಡಾಲ್, ಪಾದರಕ್ಷೆ, ಜಿಂಕೆ ಹೋಲುವ ಆರ್ಕಿಡ್ ಗಳು ನೋಡುಗರನ್ನು ಬೆರಗುಗೊಳಿಸುತ್ತವೆ.
ಬಿಳಿ, ಹಳದಿ, ಕೆಂಪು, ನೇರಳೆ, ಕಂದು ಮಿಶ್ರಿತ ಇತ್ಯಾದಿ ಬಣ್ಣದ ಹೂವುಗಳ ಆರ್ಕಿಡ್ ಗಳು ನೋಡುಗರ ಮನ ಸೆಳೆಯಲಿವೆ.
ಜೊತೆಗೆ, ಆರ್ಕಿಡ್ ಉದ್ಯಮ ಇಂದು ಎತ್ತ ಸಾಗಿದೆ? ಈ ಪುಷ್ಪಕೃಷಿಯ ಉಪಯೋಗಗಳೇನು? ಇದನ್ನು ವಾಣಿಜ್ಯ ಬೆಳೆಯಾಗಿ ಪರಿವರ್ತಿಸಿಕೊಳ್ಳಬಹುದಾದ ರೀತಿ, ಬೆಳೆಯ ವಿಧಾನ ಹಾಗೂ ಸಂರಕ್ಷಣೆ ಮಾಡುವ ವಿಧಾನದ ಬಗ್ಗೆ ಪ್ರಾತ್ಯಕ್ಷಿಕೆಗಳ ಮೂಲಕ ತಾಂತ್ರಿಕ ಮಾಹಿತಿ ನೀಡಲಾಗುವುದು.
ವೈವಿಧ್ಯಮಯ ಆರ್ಕಿಡ್ ಪ್ರದರ್ಶನ: ಸುಮಾರು 300 ಕ್ಕೂ ಹೆಚ್ಚು ಸದಸ್ಯರು ಬೆಳೆದಿರುವ ಡೆಂಟ್ರೋಬಿಯಮ್ಸ್ , ಪ್ಯಾಪಿಲೋ ಪೀಡಿಯಂ, ವ್ಯಾಂಡಾ ಮತ್ತಿತರ ತಳಿಯ ಆರ್ಕಿಡ್ ಸಸಿಗಳನ್ನು ಪ್ರದರ್ಶಿಸಲಾಗುತ್ತದೆ ಹೈಬ್ರಿಡ್ ತಳಿಗಳಾದ ಫಲನೋಪ್ಸಿಸ್, ವ್ಯಾಂಡಾ, ವೊಕಾರಾ ಸೇರಿದಂತೆ ಸುಮಾರು 15-18 ತಳಿಯ ಆರ್ಕಿಡ್‍ಗಳನ್ನು ಪ್ರದರ್ಶಿಸಲಾಗುವುದು. ಮಾರಾಟಕ್ಕೆಂದೇ ಸುಮಾರು 12 ಬಗೆಯ ತಳಿಗಳಿರಲಿವೆ. ಹಾಗೂ ಅದರಲ್ಲೇ ಸ್ಪರ್ಧೆಗೋಸ್ಕರ 100 ಗಿಡಗಳು ಪ್ರದರ್ಶನಗೊಳ್ಳಲಿವೆ ಎನ್ನುತ್ತಾರೆ ಸೊಸೈಟಿಯ ಅಧ್ಯಕ್ಷ ಕೆ.ಎಸ್. ಶಶಿಧರ್.