ಜಿಲ್ಲಾ ಸುದ್ದಿ

ಲಾಕ್ ಅಪ್ ಡೆತ್ ಶಂಕೆ: ಎಸ್ಐ ಸಸ್ಪೆಂಡ್

Srinivas Rao BV

ಮೈಸೂರು: ದಸ್ತಗಿರಿ ಮಾಡಲು ಹೋದ ಪೊಲೀಸ್ ಪೇದೆಗಳಿಬ್ಬರ ಮೇಲೆ ಹಲ್ಲೆ ನಡೆಸಿ ಅವರ ಬೈಕನ್ನು ಬೆಂಕಿ ಹಾಕಿ ಸುತ್ತಿರುವ ಪ್ರಕರಣದ ಆರೋಪಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಹುಣಸೂರಿನ ರತ್ನಪುರಿಯಲ್ಲಿ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಠಾಣೆಯ ಎಸ್.ಐ ಲೋಕೇಶ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಮೈಸೂರು ಎಸ್.ಪಿ ಅಭಿನವ್ ಖರೆ ತಿಳಿಸಿದ್ದಾರೆ. ದೇವರಾಜು ಮೃತಪಟ್ಟ ಆರೋಪಿಯಾಗಿದ್ದು ಈತನಿಗೆ ಇಬ್ಬರು ಪತ್ನಿಯರಿದ್ದಾರೆ. ಈತನಿಂದ ಹಲ್ಲೆಗೊಳಗಾಗಿ ಗಾಯಗೊಂಡಿರುವ ಪೇದೆಗಳಾದ ಆನಂದ್ ಮತ್ತು ಜಿ.ಎಸ್ ಸತೀಶ್ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ದೇವರಾಜ್ ನನ್ನು ದಸ್ತಗಿರಿ ಮಾಡಲು ಆ.29 ರಂದು ಪೇದೆಗಳಿಬ್ಬರು ರತ್ನಪುರಿಗೆ ಬೈಕಿನಲ್ಲಿ ತೆರಳಿದ್ದರು.
ಮನೆಯಲ್ಲಿದ್ದ ಆರೋಪಿ ದೇವರಾಜ್ ನನ್ನು ಕರೆತರಲು ಹೋದಾಗ, ಹೊರಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಕುಡಗೋಲಿನಿಂದ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ. ಹಾಗೂ ಅವರ ಬೈಕ್ ಗೆ ಬೆಂಕಿ ಹಚ್ಚಿದ್ದಾನೆ. ವಿಷಯ ತಿಳಿದ ಎಸ್.ಐ ಲೋಕೇಶ್ ಆರೋಪಿಯನ್ನು ಸಂಜೆ ವೇಳೆಗೆ ಬಂಧಿಸಿದ್ದಾರೆ. ಆರೋಪಿ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲೇ ಆರೋಪಿ ಮೃತಪಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ ದೇವರಾಜ್ ಪೊಲೀಸ್ ವಶದಲ್ಲಿದ್ದಾಗಲೇ ಮೃತಪಟ್ಟಿರುವುದರಿಂದ ಇದು ಲಾಕ್ ಅಪ್ ಡೆತ್ ಎನ್ನುವುದು ಗ್ರಾಮಸ್ಥರ ಆರೋಪವಾಗಿದೆ.
ಮೃತನ ಸಾವಿನ ಪ್ರಕರಣದ ಬಗ್ಗೆ ತನಿಖೆಯಾಗಬೇಕೆಂದು ಗ್ರಾಮದಲ್ಲಿ ಬಂದ್ ಆಚರಿಸಲಾಯಿತು. ಗ್ರಾಮ ಪ್ರವೇಶಿಸಲು ಮುಂದಾದ ಪೊಲೀಸರನ್ನು ಘೇರಾವ್ ಹಾಕಲಾಯಿತು. ನಂತರ ಶಾಂತಿ ಸಭೆಯಲ್ಲಿ ಮೃತನ ಕುಟುಂಬಕ್ಕೆ ಸರ್ಕಾರದಿಂದ 25 ಲಕ್ಷ ರೂ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

SCROLL FOR NEXT