ಪಾಟಾ ಅಂತಾರಾಷ್ಟ್ರೀಯ ಪ್ರವಾಸಿ ಮೇಳವನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು: ಕರ್ನಾಟಕವು ಬಂಡವಾಳ ಹೂಡಿಕೆಗೆ ಆರೋಗ್ಯಕರ ವಾತಾವರಣವಿರುವ ರಾಜ್ಯ ಎಂಬುದು ಈಗಾಗಲೇ ಸಾಬೀತಾಗಿದ್ದು, ಪ್ರವಾಸೋದ್ಯಮದಲ್ಲಿ ಹೂಡಿಕೆ ಮತ್ತು ಉತ್ತೇಜನಕ್ಕೆ 319 ಸ್ಥಳಗಳನ್ನು ಗುರುತಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಪಾಟಾ ಅಂತಾರಾಷ್ಟ್ರೀಯ ಪ್ರವಾಸಿ ಮೇಳದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಿಶ್ವದ ಬೇರೆ ಬೇರೆ ದೇಶದ ಪ್ರತಿನಿಧಿಗಳಿಗೆ ಹೂಡಿಕೆಗೆ ಕರ್ನಾಟಕವನ್ನು ಗಂಭೀರವಾಗಿ ಪರಿಗಣಿಸುವಂತೆ ಕರೆನೀಡಿದರು. ಕೇಂದ್ರ ಪ್ರವಾಸೋದ್ಯಮ ಸಚಿವ ಮಹೇಶ್ ಶರ್ಮ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ಭಾರತದ ಪ್ರವಾಸೋದ್ಯಮವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಲು ರಾಯಭಾರಿ ಎಂದು ಬಣ್ಣಿಸಿದರು. ಪ್ರವಾಸೋದ್ಯಮ ಕ್ಷೇತ್ರದಿಂದ ದೇಶದ ಜಿಡಿಪಿ ಪಾಲು ಕಡಿಮೆ ಇದೆ. ಆದರೆ ನಮ್ಮಲ್ಲಿ ಪ್ರವಾಸೋದ್ಯಮ ಬೆಳವಣಿಗೆಗೆ ಪೂರಕವಾದ ಎಲ್ಲ ವಾತಾವರಣವಿದ್ದು ಈ ಕ್ಷೇತ್ರದ ಬೆಳವಣಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಈಗಿರುವ ಪ್ರವಾಸಿ ಹೆಲ್ಪ್ ಲೈನ್‍ನಲ್ಲಿ ಹಿಂದಿ ಮತ್ತು ಇಂಗ್ಲಿಷ್ ಕಾರ್ಯನಿರ್ವಹಣೆಯಾಗುತ್ತಿದ್ದು, ಸದ್ಯವೇ 12 ಭಾಷೆಯನ್ನು ಈ ಸೇವೆಗೆ ಬಳಸಿಕೊಳ್ಳುವ ಜೊತೆಗೆ ದಿನದ 24 ಗಂಟೆ ಕಾರ್ಯನಿರ್ವಹಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ವಿಶ್ವದ ಪ್ರವಾಸಿಗರು ಸುಲಭವಾಗಿ ಬಂದುಹೋಗಲು ಅನುಕೂಲ ಮಾಡಿಕೊಡಲು ವೀಸಾ ಪ್ರಕ್ರಿಯೆ ಸರಳೀಕರಿಸಲಾಗಿದೆ. ಈ ಪ್ರಸ್ತಾಪಕ್ಕೆ 130 ರಾಷ್ಟ್ರಗಳು ಸ್ಪಂದಿಸಿರುವುದು ಪ್ರವಾಸೋದ್ಯಮಕ್ಕೆ ಉತ್ತೇಜನಕಾರಿ ಎಂದ ಅವರು, ಕರ್ನಾಟಕ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಮುಂದೆ ಬರುವವರಿಗೆ ಎಲ್ಲ ರೀತಿಯ ಸಹಕಾರ ನೀಡಲು ಸರ್ಕಾರ ಬದ್ಧ ಎಂದು ಹೇಳಿದರು.
ಪಾಟಾ ಅಧ್ಯಕ್ಷ ಕೆವಿನ್ ಮರ್ಫಿ ಮಾತನಾಡಿ, ಆರ್ಥಿಕವಾಗಿ ಸಾಕಷ್ಟು ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಈ ಮೇಳ ನಡೆಯತ್ತಿರುವುದರಿಂದ ಕರ್ನಾಟಕದ ಅನೇಕ ಸ್ಥಳಗಳು ವಿಶ್ವಮಟ್ಟದಲ್ಲಿ ತೆರೆದುಕೊಳ್ಳುತ್ತದೆ ಎಂದರು. ಪ್ರವಾಸೋದ್ಯಮ ಸಚಿವ ಆರ್.ವಿ. ದೇಶಪಾಂಡೆ ಮಾತನಾಡಿ, ವಿಶ್ವದ 61 ದೇಶದ 1100 ಪ್ರತಿನಿಧಿಗಳು ಭಾಗವಹಿಸುತ್ತಿರುವ ಈ ಮೇಳ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುತ್ತದೆ ಎಂದು ಅಭಿಪ್ರಾಯಪಟ್ಟರು.
ರಾಜ್ಯ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೂಡಿಕೆಗಿರುವ ಅವಕಾಶದ ಬಗ್ಗೆ ಈ ಮೇಳವು ವಿಶ್ವಕ್ಕೆ ಪರಿಚಯಿಸಲಿದೆ. ಬಂಡವಾಳ ಹೂಡಿಕೆ ಸ್ನೇಹಿ ವಾತಾವರಣಕ್ಕೆ ನಮ್ಮ ಸರ್ಕಾರ ಎಲ್ಲ ಕ್ರಮ ಕೈಗೊಂಡಿದೆ ಎಂದರು. ಪಾಟಾ ಸಿಇಒ ಮರಿಯೊ ಹಾರ್ಡಿ, ಸಂಸದರಾದ ಎಂ.ವೀರಪ್ಪ ಮೊಯ್ಲಿ, ಜಂಗಲ್ ಲಾಡ್ಜ್ ಅಧ್ಯಕ್ಷ ಜಯಸಿಂಹ, ಕೆಎಸ್‍ಟಿಡಿಸಿ ಅಧ್ಯಕ್ಷ ಹುಸೇನ್‍ಇದ್ದರು.
ಪ್ರವಾಸೋದ್ಯಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಡೆಯುವ ಅಂತಾರಾಷ್ಟ್ರೀಯ ಮಟ್ಟದ ಪಾಟಾ ಟ್ರಾವೆಲ್ ಮಾರ್ಟ್‍ಗೆ ಭಾನುವಾರ ಬೆಂಗಳೂರಿನಲ್ಲಿ ವಿದ್ಯುಕ್ತ ಚಾಲನೆ ದೊರೆಯಿತು. ಕರ್ನಾಟಕದ ಕಲೆ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ವಾತಾವರಣ ಸೃಷ್ಟಿಸಿರುವ ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಮೂರು ದಿನ ಈ ಸಮ್ಮೇಳನ ನಡೆಯುತ್ತಿದ್ದು, ಏಷ್ಯಾ ಖಂಡದಲ್ಲಿರುವ ದೇಶಗಳ ಪ್ರತಿನಿಧಿಗಳು, ಅಲ್ಲಿನ ಸರ್ಕಾರದ ಪ್ರಮುಖರು ಬಂದಿಳಿದಿದ್ದಾರೆ. ಕರ್ನಾಟಕದ ಕಲೆಗಳಾದ ಯಕ್ಷಗಾನ, ಡೊಳ್ಳು, ವೀರಗಾಸೆ, ಕೊಂಬು ಕಹಳೆ, ನಂದಿ ಕುಣಿತದ ತಂಡಗಳು ವಿದೇಶದ ಪ್ರತಿನಿಧಿಗಳನ್ನು ಬರಮಾಡಿಕೊಂಡವು. ವಿದೇಶಿ ಪ್ರತಿನಿಧಿಗಳು ಸಹ ಇಲ್ಲಿನ ಕಲಾತಂಡಗಳ ಪ್ರದರ್ಶನ ಕಂಡು ಸಂಭ್ರಮಿಸಿ ಕಲಾವಿದರೊಂದಿಗೆ ಛಾಯಾಚಿತ್ರ ತೆಗೆದುಕೊಂಡರು.