ಬೆಂಗಳೂರು: ನಲವತ್ತ ಮೂರು ವರ್ಷಗಳ ಹೋರಾಟದ ಬಳಿಕ `ಒಂದೇ ಶ್ರೇಣಿ ಒಂದೇ ಪಿಂಚಣಿ' ಯೋಜನೆ ಅನುಷ್ಠಾನಗೊಳ್ಳುತ್ತಿರುವುದಕ್ಕೆ ಮಾಜಿ ಯೋಧರು, ಪ್ರಧಾನಿ ನರೇಂದ್ರ ಮೋದಿ ಅವರ ಜತೆಗೆ ರಕ್ಷಣೆ, ಗೃಹ ಹಾಗೂ ಆರ್ಥಿಕ ಸಚಿವರಿಗೂ ಅಭಿನಂದನೆ ಸಲ್ಲಿಸಿದ್ದಾರೆ.
ಸೋಮವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿವೃತ್ತ ಮೇಜರ್ ಜನರಲ್ ನಂಜಪ್ಪ, ಮಾಜಿ ಯೋಧರ ಸುದೀರ್ಘ ಬೇಡಿಕೆಯಾಗಿದ್ದ ಒಆರ್‍ಒಪಿ ಯೋಜನೆಯನ್ನು ಈಗಿನ ಕೇಂದ್ರ ಸರ್ಕಾರ ಕೃಷ್ಣಜನ್ಮಾಷ್ಟಮಿಯಂದು ಜಾರಿಗೆ ತಂದಿದೆ. ಈ ಹಿಂದಿನ ಸರ್ಕಾರ ಭರವಸೆ ನೀಡಿ ಕೇವಲ 500 ಕೋಟಿ ನೀಡಿತ್ತು. ಈಗಿನ ಸರ್ಕಾರ ಯೋಜನೆಯನ್ನೇ ಜಾರಿಗೆ ತಂದು ದೇಶ ಕಾದವರನ್ನು ಕೈಬಿಡುವುದಿಲ್ಲ ಎಂಬುದನ್ನು ಖಾತ್ರಿಪಡಿಸಿತು. ಈ ಯೋಜನೆ ಜಾರಿಯಾಗಿ
ಯೋಧರ ಸಮಸ್ಯೆಗಳೆಲ್ಲ ಪರಿಹಾರವಾಗಿದೆ ಎಂಬುದು ತರವಲ್ಲ. ಇನ್ನೂ ಸಣ್ಣ ಪುಟ್ಟ ಗೊಂದಲವಿದ್ದು, ಅದೆಲ್ಲವನ್ನು ಹಂತ ಹಂತವಾಗಿ ಪ್ರಧಾನಿ ನೆರವೇರಿಸುತ್ತಾರೆ ಎಂಬ ನಂಬಿಕೆ ನಮ್ಮದಾಗಿದೆ ಎಂದರು.
ನಿವೃತ್ತ ಏರ್ ವೈಸ್ ಮಾರ್ಷಲ್ ಮುರಳಿ ಮಾತನಾಡಿ, `ಒಆರ್‍ಒಪಿ' ಯೋಜನೆಯಿಂದ ದೇಶದ 22 ಲಕ್ಷ ಮಾಜಿ ಯೋಧರು, 6.5 ಲಕ್ಷ ವಿಧವೆಯರು (ಮಡಿದ ಯೋಧರ ಪತ್ನಿಯರು) ಬಾಳಲ್ಲಿ ಆಶಾಕಿರಣ ಮೂಡಿದೆ. ಕರ್ನಾಟಕದ ಎರಡು ಲಕ್ಷ ಯೋಧರು ಈ ಸೌಲಭ್ಯ ಪಡೆಯುವರು ಎಂದು ಹರ್ಷ ವ್ಯಕ್ತಪಡಿಸಿದರು.
ಒಬ್ಬ ಯೋಧನಿಗೆ ಮೊದಲು ಬೇಕಾದದ್ದು ಘನತೆ, ನಂತರ ಜೀವನ ಸಾಗಿಸಲು ಹಣ. ಮೊದಲನೆಯದು ಸಿಕ್ಕರೂ ಎರಡನೆಯದಕ್ಕೆ ಹೋರಾಟ ಮಾಡಬೇಕಾಗಿತ್ತು. 43 ವರ್ಷಗಳ ಸತತ ಹೋರಾಟಕ್ಕೆ ಈಗ ನ್ಯಾಯ ಸಿಕ್ಕಿದೆ.
● ಮುರಳಿ, ನಿವೃತ್ತ ಏರ್ ವೈಸ್ ಮಾರ್ಷಲ್