ಜಿಲ್ಲಾ ಸುದ್ದಿ

ಇನ್ನೊಂದು ಮಗುವಿನ ಶವ ಪತ್ತೆ

ಬೆಂಗಳೂರು: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಾರೆಂದು ಭಾವಿಸಿ ಪ್ರೇಯಸಿಯ ಮೂವರು ಮಕ್ಕಳನ್ನು ಮಾ್ಯನ್‍ಹೋಲ್‍ಗೆ ತಳ್ಳಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಮತ್ತೊಬ್ಬ ಬಾಲಕನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಇದರೊಂದಿಗೆ ಎರಡು ಶವಗಳು ಪತ್ತೆಯಾದಂತಾಗಿದ್ದು, ಬಾಲಕಿಯ ಶವಕ್ಕಾಗಿ ಅಗ್ನಿಶಾಮಕ ಸಿಬ್ಬಂದಿ ನಡೆಸಿದ ಶೋಧ ಕಾರ್ಯ ಇಂದು ಬೆಳಗ್ಗೆ ಮತ್ತೆ ಆರಂಭವಾಗಲಿದೆ. ಸೋಮವಾರ ರಾತ್ರಿ ಬಾಲಕ ಉಸ್ಮಾನ್ ಬೇಗ್ (4) ಶವ ಮ್ಯಾನ್ ಹೋಲ್ ನಲ್ಲಿ ಪತ್ತೆಯಾಗಿತ್ತು. ಉಳಿದ ಎರಡು ಶವಗಳಿಗಾಗಿ ಪೊಲೀಸರು ಅಗ್ನಿಶಾಮಕ ಸಿಬ್ಬಂದಿ ಹಾಗೂ ಒಳಚರಂಡಿ ಮಂಡಳಿ ಅಧಿಕಾರಿಗಳ ನೆರವು ಕೋರಿದ್ದರು. ಮಂಗಳವಾರ ಬೆಳಗ್ಗೆ 6 ಗಂಟೆಯಿಂದಲೇ ಪ್ರಾರಂಭವಾದ ಕಾರ್ಯಾಚರಣೆಯಲ್ಲಿ ಮೊದಲ ಬಾರಿಗೆ ಪೊಲೀಸ್ ಇಲಾಖೆ ಡ್ರೋನ್ ಕ್ಯಾಮರಾ ಬಳಸಿತ್ತು.

ನೀಲನಕ್ಷೆ, ಫ್ಲಡ್‍ಲೈಟ್ ಬಳಕೆ:

ಬಾಣಸವಾಡಿ ಅಗ್ನಿಶಾಮಕ ಠಾಣೆಯಿಂದ ರಕ್ಷಣಾ ವಾಹನ ಹಾಗೂ 10 ಸಿಬ್ಬಂದಿ ಮಂಗಳವಾರ ಬೆಳಗ್ಗಯೇ ಶವ ಬಿಸಾಡಿದ್ದ ಎಚ್‍ಬಿಆರ್ ಬಡಾವಣೆ ಸಮೀಪದ ಕಿರು ಅರಣ್ಯ ಪ್ರದೇಶಕ್ಕೆ ಆಗಮಿಸಿದ್ದರು. ಇವರೊಂದಿಗೆ ಒಳಚರಂಡಿ ಮಂಡಳಿ ಅಧಿಕಾರಿಗಳು ಕೂಡಾ ಸ್ಥಳಕ್ಕೆ ಆಗಮಿಸಿ ಮಾ್ಯನ್‍ಹೋಲ್‍ನಿಂದ ರಾಜಕಾಲುವೆವರೆಗಿನ ಪೈಪ್‍ಲೈನ್‍ನ ನೀಲನಕ್ಷೆ ತಂದಿದ್ದರು.

ಮ್ಯಾನ್‍ಹೋಲ್‍ನಿಂದ ಪೈಪ್ ಸಂಪರ್ಕ ಎಲ್ಲಿಯವರೆಗೆ ಹೋಗಿದೆ ಎಂದು ಪತ್ತೆ ಮಾಡಲು ನೀಲನಕ್ಷೆ ನೆರವಾಯಿತು. ಮ್ಯಾನ್ ಹೋಲ್ ನಿಂದ ಕೆಲವೇ ಮೀಟರ್ ದೂರದಲ್ಲಿ ರಾಜಕ ಕಾಲುವೆ ಇದ್ದ ಕಾರಣ ಭಾರಿ ಮಳೆಯಿಂದ ಶವಗಳು ಕೊಚ್ಚಿಕೊಂಡು ಹೋಗಿರಬಹುದು ಎನ್ನುವ ಸಂಶಯದ ಮೇಲೆ ಅಗ್ನಿಶಾಮಕ ಸಿಬ್ಬಂದಿ ಸುಮಾರು 2ಕಿ.ಮೀವರೆಗೂ ರಾಜ ಕಾಲುವೆಯಲ್ಲಿ ಹುಡುಕಾಟ ನಡೆಸಿದರು.

ಮತ್ತೊಂದೆಡೆ, ಕೆಲ ಸಿಬ್ಬಂದಿ ಶವ ಬಿಸಾಡಲಾಗಿದ್ದಮಾ್ಯನ್‍ಹೋಲ್‍ನ್ನು ಒಡೆದು ಶೋಧ ಕಾರ್ಯ  ನಡೆಸುತ್ತಿದ್ದಾಗ ಸಂಜೆ 5.30ರ ಸುಮಾರಿಗೆ ಬಾಲಕ ಅಲಿ ಅಬ್ಬಾಸ್ ಬೇಗ್ (8) ಶವ ಪತ್ತೆಯಾಗಿದೆ. ಮ್ಯಾನ್ ಹೋಲ್ ನಿಂದ ಸುಮಾರು 20 ಅಡಿವರೆಗೂ ಅಗೆದ ನಂತರ ಶವ ಸಿಕ್ಕಿದೆ. ಜಟ್ಟಿಂಗ್ ಯಂತ್ರದ ಮೂಲಕ ರಭಸವಾಗಿ ನೀರು ಬಿಟ್ಟು ಪೈಪ್‍ನೊಳಗೆ ಬಿದ್ದಿದ್ದ ಮಣ್ಣನ್ನು ತೆರವುಗೊಳಸಲಾಯಿತು. ಸಂಜೆ ನಂತರ ಫ್ಲಡ್ ಲೈಟ್‍ಗಳನ್ನು ಬಳಸಿ ಕಾರ್ಯಾಚರಣೆ ನಡೆಸಲಾಯಿತು ಎಂದು ಅಗ್ನಿಶಾಮಕ ಅಧಿಕಾರಿ ಮಂಜುನಾಥ ಹೇಳಿದರು.

ಏನಿದು ಪ್ರಕರಣ?:
ಗಾರ್ಮೆಂಟ್ಸ್‍ನಲ್ಲಿ ಕೆಲಸ ಮಾಡುವ ನಾಸಿಯಾ ಬೇಗಂ ಎಂಬಾಕೆ ಪತಿಯಿಂದ ದೂರವಾಗಿ ಮೂವರು ಮಕ್ಕಳೊಂದಿಗೆ ನೆಲೆಸಿದ್ದರು. ಈಕೆಗೆ ಅಕ್ರಮ ಸಂಬಂಧಗಳಿದ್ದವು ಎನ್ನುತ್ತಾರೆ ಪೊಲೀಸರು. ನಾಸಿಯಾಳ ಪತಿ ಹೈದ್ರಾಬಾದ್‍ನಲ್ಲಿ ನೆಲೆಸಿದ್ದರು. ಆದರೆ, ನಾಸಿಯಾರನ್ನು ಪತಿಯ ಚಿಕ್ಕಪ್ಪನ ಮಗ ಫಾಯುಮ್ ಖಾನ್(24) ವಿವಾಹವಾಗಬೇಕು ಎಂದು ಯೋಜಿಸಿದ್ದ. ಅದಕ್ಕೆ ನಾಸಿಯಾ ತಂದೆ ವಿರೋಧ ವ್ಯಕ್ತಪಡಿಸಿದ್ದರು. ಆಕೆಗೆ ಮೂವರು ಮಕ್ಕಳಿದ್ದು ವಿವಾಹವಾಗುವುದು ಸರಿಯಲ್ಲ ಎಂದು ಆಕ್ಷೇಪಿಸಿದ್ದರು.

ಹೀಗಾಗಿ, ಆ ಮಕ್ಕಳನ್ನು ಆಕೆಯಿಂದ ದೂರ ಮಾಡಬೇಕು ಎಂದು ಫಾಯುಮ್ ಖಾನ್ ಸಂಚು ರೂಪಿಸಿದ್ದ. ಆ.26ರಂದು ಆಕೆಯ ಮನೆಗೆ ಆರೋಪಿ ಫಾಯುಮ್ ಹೋಗಿದ್ದಾಗ ನಾಸಿಯಾ ಅಲ್ಲಿ ಬೇರೊಬ್ಬ ವ್ಯಕ್ತಿ ಜತೆ ಇರುವುದನ್ನು ನೋಡಿ ಕುಪಿತಗೊಂಡಿದ್ದ. ಮರುದಿನ ಶಾಲೆಯಿಂದ ಮನೆಗೆ ಮರಳುತ್ತಿದ್ದ ನಾಸಿಯಾಳ ಮೂವರು ಮಕ್ಕಳನ್ನು ಕರೆದುಕೊಂಡು ಹೋದ ಆರೋಪಿ ಎಚ್‍ಬಿಆರ್ ಬಡಾವಣೆಯಲ್ಲಿರುವ ಮ್ಯಾನ್‍ಹೋಲ್‍ಗೆ ಅವರನ್ನು ತಳ್ಳಿ ಕೊಲೆ ಮಾಡಿದ್ದ. ಮಕ್ಕಳು ಶಾಲೆಯಿಂದ ಹಿಂದಿರುಗದ ಹಿನ್ನೆಲೆಯಲ್ಲಿ ಗಾಬರಿಯಾದ ನಾಸಿಯಾ ಬಾಣಸವಾಡಿ ಠಾಣೆಗೆ ದೂರು ನೀಡಿದ ನಂತರ ಹತ್ಯೆ ಬೆಳಕಿಗೆ ಬಂದಿತ್ತು.

ಮೊದಲ ಬಾರಿ ಡ್ರೋನ್ ಕ್ಯಾಮರಾ ಬಳಕೆ
ಪ್ರತಿಭಟನೆ, ಮೆರವಣಿಗೆ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಪೊಲೀಸರು ಭದ್ರತೆಗಾಗಿ ಬಳಸುವ ಡ್ರೋನ್ ಕ್ಯಾಮರಾವನ್ನು ರಾಜ ಕಾಲುವೆಯಲ್ಲಿ ಶವಗಳ ಪತ್ತೆ ಮಾಡಲು ಇದೇ ಮೊದಲ ಬಾರಿ ಬಳಸಲಾಯಿತು. ಆದರೆ, ಅದರಿಂದ ಯಾವುದೇ ಪ್ರಯೋಜನವಾಗದೇ ಕೇವಲ ವೈಮಾನಿಕ ನೋಟವಷ್ಟೇದಕ್ಕಿತು.

ಒಂದು ಕಿ.ಮೀ. ದೂರದವರೆಗೂ ವ್ಯಕ್ತಿಗಳ ಗುರುತನ್ನು ನಿಖರವಾಗಿ ಪತ್ತೆ ಹಚ್ಚುವ ಸಾಮಥ್ರ್ಯ ಈ ಕ್ಯಾಮೆರಾಕ್ಕಿದೆ. ಅತ್ಯಂತ ಸಣ್ಣ ಪ್ರಮಾಣದಲ್ಲಿ ಕಾಣಬಹುದಾದ ವ್ಯಕ್ತಿಗಳ ಚರ್ಮ, ಕಿವಿ, ಕಾಲು ಬೆರಳು,  ಗುರುಗಳನ್ನು ಈ ಕ್ಯಾಮೆರಾ ಸುಲಭವಾಗಿ ಪತ್ತೆ ಹಚ್ಚಲಿರುವ ಹಿನ್ನೆಲೆಯಲ್ಲಿ ಬಳಕೆಗೆ ಯತ್ನಿಸಲಾಗಿತ್ತು. ಆದರೆ, ಶವಗಳು ಕಾಲುವೆಯೊಳಗೆ ಇದ್ದುದರಿಂದ, ಡ್ರೋನ್ ಕ್ಯಾಮರಾ ಉಪಯೋಗವಾಗಲಿಲ್ಲ.

SCROLL FOR NEXT