ರಾಜ್ಯ ಎದುರಿಸುತ್ತಿರುವ ಭೀಕರ ಬರಗಾಲ ಪರಿಸ್ಥಿತಿ ಕುರಿತು ಅಧ್ಯಯನ ನಡೆಸಲು ಕೇಂದ್ರ ಅಧಿಕಾರಿಗಳ ಅಧ್ಯಯನ ತಂಡ ಸೆ. 9 ರಂದು ರಾಜ್ಯಕ್ಕೆ ಆಗಮಿಸಲಿದೆ. ಕೇಂದ್ರದ ನಾಲ್ಕು ತಂಡಗಳು ಬೆಳೆ ಹಾನಿಗೀಡಾದ ಪ್ರದೇಶಗಳಿಗೆ ತೆರಳಿ ಬರ ಪರಿಸ್ಥಿತಿ ಕುರಿತು ಅಧ್ಯಯನ ನಡೆಸಿ, ಕೇಂದ್ರಕ್ಕೆ ವರದಿ ಸಲ್ಲಿಸಲಿವೆ. ಇದರಿಂದಾಗಿ ಕೇಂದ್ರದಿಂದ ಹೆಚ್ಚಿನ ನೆರವು ದೊರೆಯುವ ನಿರೀಕ್ಷೆಯಿದೆ. 40 ವರ್ಷಗಳ ಹಿಂದೆ ಕಂಡು ಬಂದ ಭೀಕರ ಬರಗಾಲ ಪರಿಸ್ಥಿತಿ ಈಗ ಮತ್ತೆ ಎದುರಾಗಿದೆ. ಬರ ಪರಿಸ್ಥಿತಿಯನ್ನು ಎದುರಿಸಲು ಸರ್ಕಾರ ಕ್ರಮ ಕೈಗೊಂಡಿದೆ. ರಾಜ್ಯದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಮಳೆ ಕೊರತೆಯಿಂದಾಗಿ ತೀವ್ರ ಬರ ಗಾಲ ಪರಿಸ್ಥಿತಿ ಎದುರಾಗಿದೆ.
ಬರ ಅಧ್ಯಯನಕ್ಕೆ ಪ್ರಧಾನಿ ಬರಲಿ; ಬಸವರಾಜ ರಾಯರೆಡ್ಡಿ
ಕರ್ನಾಟಕದಲ್ಲಿ ಭೀಕರ ಬರಗಾಲವಿದ್ದರೂ ಬರ ಅಧ್ಯಯನಕ್ಕೆ ಆಗಮಿಸದ ಪ್ರಧಾನಿ ನರೇಂದ್ರ ಮೋದಿ ಅವರು ಸದಾ ವಿದೇಶ ಪ್ರವಾಸ-ಗಳಲ್ಲಿಯೇ ಇರುತ್ತಾರೆ, ಅವರು ದೇಶದ ಪ್ರಧಾನಿಯೋ ವಿದೇಶದ ಪ್ರಧಾನಿಯೋ? ಎಂದು ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ ತರಾಟೆಗೆ ತೆಗೆದುಕೊಂಡರು. ಪತ್ರಿಕಾಗೋಷ್ಠಿಯಲ್ಲಿ ಮತನಾಡಿದ ಅವರು ರಾಜ್ಯದಲ್ಲಿ ಶೇ.73 ರಷ್ಟು ಮಳೆ ಕೊರತೆ ಉಂಟಾಗಿದೆ. 136 ತಾಲೂಕುಗಳನ್ನು ಬರ-ಪೀಡಿತ ಪ್ರದೇಶಗಳೆಂದು ಘೋಷಿಸಲಾಗಿದ್ದು ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನ ಸಮಸ್ಯೆ ಉಂಟಾಗಿದೆ. ಅಷ್ಟೇ ಅಲ್ಲ ಬಿತ್ತನೆ ಆಗದೆ ರೈತರು ಸಂಕಷ್ಟಕ್ಕೆ ಸಿಲುಕಿ-ಕೊಂಡಿದ್ದಾರೆ. ಇಷ್ಟಾದರೂ ರಾಜ್ಯದ ಬರ ಪರಿಸ್ಥಿತಿ ಅಧ್ಯಯನಕ್ಕೆ ಪ್ರಧಾನಿ ಆಗಮಿಸಿಲ್ಲ. 2 ದಿನ ಬರ ಅಧ್ಯಯನಕ್ಕೆ ಪ್ರವಾಸಿ ಕೈಗೊಳ್ಳ-ಬೇಕೆಂದು ಆಗ್ರಹಿಸಿದರು. ಬಿಜೆಪಿಯವರು ಸಾವಿನ ಮನೆಯಲ್ಲೂ ರಾಜಕಾರಣ ಮಾಡುತ್ತಿದ್ದಾರೆ. ಅಗ್ಗದ ಪ್ರಚಾರಕ್ಕಾಗಿ ರೈತ ಚೈತನ್ಯ ಯಾತ್ರೆ ಮಾಡುವ ಬದಲಿಗೆ ರಾಜ್ಯ ಸರ್ಕಾರದ ಜತೆ ಕೈಜೋಡಿಸಿ ಕೇಂದ್ರದ ಮೇಲೆ ಒತ್ತಡ ತಂದು ರೈತರ ಸಾಲ ಬಡ್ಡಿ ಮನ್ನಾಗೆ ಸಹಕರಿಸಬೇಕು. ನಾಡಿನ ರೈತರು, ಜನರು ಕಷ್ಟದಲ್ಲಿದ್ದಾರೆ ಎಂದರು. ಬರ ಅಧ್ಯಯನಕ್ಕೆ ಆಗಮಿಸದ ಪ್ರಧಾನಿಗೆ ನಾಚಿಕೆ ಆಗುವುದಿಲ್ಲವೇ? ಎಂದು ವಾಗ್ದಾಳಿ ನಡೆಸಿದ ಅವರು ಮಳೆ ಇಲ್ಲದ ಕಾರಣ ವಿದ್ಯುತ್ ಸಮಸ್ಯೆ ಉಂಟಾಗಿದೆ. ಕೇಂದ್ರದಿಂದ ಸಮರ್ಪಕ ವಿದ್ಯುತ್ ಪೂರೈಕೆಗೂ ಬಿಜೆಪಿಯವರು ಒತ್ತಡ ತರಬೇಕೆಂದು ಹೇಳಿದರು.
ರೈತರು ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಪಡೆದಿರುವ ಸಾಲ ಮತ್ತು ಬಡ್ಡಿ ಮನ್ನಾ ಮಾಡಬೇಕಿದೆ. ಜತೆಗೆ ಸಹಕಾರಿ, ನಬಾರ್ಡ್ ಬ್ಯಾಂಕ್‍ಗಳಲ್ಲಿನ ಸಾಲದ ಮೇಲಿನ ಬಡ್ಡಿ ಮನ್ನಾ ಆಗಬೇಕಿದೆ. ಇದಕ್ಕಾಗಿ 5 ಸಾವಿರ ಕೋ. ಅಗತ್ಯವಿದ್ದು ಕೇಂದ್ರ ರಾಜ್ಯದ ನೆರವಿಗೆ ಬರಬೇಕು. ಅಷ್ಟೇ ಅಲ್ಲ ಬರ ಪರಿಹಾರದ ಹಣ ಬಿಡುಗಡೆಯಲ್ಲೂ ಕೇಂದ್ರ ತಾರತಮ್ಯ ಮಾಡುತ್ತಿದ್ದು ರಾಜ್ಯಕ್ಕೆ ಅನ್ಯಾಯವಾಗಿದೆ. ಕೇಂದ್ರ ಸರ್ಕಾರ ಬೇರೆ ರಾಜ್ಯಗಳಿಗೆ ಹಂಚಿಕೆ ಮಾಡಿರುವ ಹಣವನ್ನು ಹೋಲಿಸಿದಾಗ ರಾಜ್ಯಕ್ಕೆ ಕೇವಲ 207 ಕೋ. ಮಾತ್ರ ದೊರೆಯುತ್ತದೆ. ಆದರೆ ಮಹಾರಾಷ್ಟ್ರಕ್ಕೆ 1112 ಕೋ. ಹಂಚಿಕೆ ಮಾಡಲಾಗಿದೆ. ರಾಜಸ್ಥಾನದ ನಂತರ ಕರ್ನಾಟಕ ಹೆಚ್ಚು ಒಣ ಪ್ರದೇಶ ಹೊಂದಿದೆ. ಆದರೂ ಹಣ ಹಂಚಿಕೆಯಲ್ಲಿ ಕಡಿಮೆ ಮಾಡುತ್ತಿರುವುದು ಸರಿಯಲ್ಲ ಎಂದು ರಾಯರೆಡ್ಡಿ ಪ್ರತಿಪಾದಿಸಿದರು. ಬರ ಪರಿಹಾರ ಕಾಮಗಾರಿಗಳನ್ನು ಪ್ರಧಾನಿ ಗಂಭೀರವಾಗಿ ಪರಿಗಣಿಸಿ ಕೇಂದ್ರದಿಂದ ರಾಜ್ಯಕ್ಕೆ ಆಗಿರುವ ಅನ್ಯಾಯ ಸರಿಪಡಿಸಿ ಸಮರ್ಪಕ ಹಣ ಬಿಡುಗಡೆ ಮಾಡಬೇಕು ಎಂದರು.