ಮಂಡ್ಯ: ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದಿಂದ ದೂರ ಶಿಕ್ಷಣ ಪದವಿ ಗಳಿಸಿ ಕರ್ನಾಟಕ ಗೆಜೆಟೆಡ್ ಪ್ರೊಬೆಷನರಿ ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆದಿದ್ದ 30ಕ್ಕೂ ಹೆಚ್ಚು ಅಭ್ಯರ್ಥಿಗಳು ಇದೀಗ ಅನರ್ಹಗೊಂಡಿದ್ದಾರೆ. ಇದಕ್ಕೆ ಕಾರಣ ಈ ಎಲ್ಲ ಅಭ್ಯರ್ಥಿಗಳು ಕರ್ನಾಟಕ ಮುಕ್ತ ವಿವಿಯಲ್ಲಿ ಪದವಿ ಪಡೆದಿರುವುದು. ಯಾರದೊ ತಪ್ಪಿಗೆ, ಇನ್ಯಾರಿಗೊ ಶಿಕ್ಷೆ ಎನ್ನುವಂತೆ ವಿವಿಯ ಅವಾಂತರಕ್ಕೆ ಅಭ್ಯರ್ಥಿಗಳು ಆತಂಕಕ್ಕೆ ಒಳಗಾಗುವಂತೆ ಮಾಡಿದೆ. ಕರ್ನಾಟಕ ಮುಕ್ತ ವಿವಿಯ ದೂರ ಶಿಕ್ಷಣಕ್ಕೆ ಸಂಬಂಧಿಸಿದಂತೆ ಯುಜಿಸಿ ನಿಯಮಗಳನ್ನು ಉಲ್ಲಂಘನೆ ಮಾಡಿರುವ ಹಿನ್ನೆಲೆಯಲ್ಲಿ 2012-13ರ ನಂತರ ಎಲ್ಲ ಕೋರ್ಸ್‍ಗಳ ಮಾನ್ಯತೆಯನ್ನು ವಿಶ್ವವಿದ್ಯಾನಿಲಯದ ಧನ ಸಹಾಯ ಆಯೋಗ (ಯುಜಿಸಿ) ರದ್ದುಗೊಳಿಸಿದೆ.
ಕರ್ನಾಟಕ ಲೋಕ ಸೇವಾ ಆಯೋಗ ಮಂಗಳವಾರ ಮಧ್ಯಾಹ್ನ ತನ್ನ ವೆಬ್‍ಸೈಟ್‍ನಲ್ಲಿ ಕೆಪಿಎಸ್ಸಿ ಮುಖ್ಯ ಪರೀಕ್ಷೆಗೆ ಅನರ್ಹರಾದವರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ 2013-14 ಮತ್ತು 2014-15ನೇ ಸಾಲಿನಲ್ಲಿ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದಿಂದ ಪದವಿ ಗಳಿಸಿದ 30ಕ್ಕೂ ಹೆಚ್ಚು ಮಂದಿ ಮುಖ್ಯ ಪರೀಕ್ಷೆಯಿಂದ ದೂರ ಉಳಿಯುವಂತಾಗಿದೆ.
ಕರ್ನಾಟಕ ಗೆಜೆಟೆಡ್ ಪ್ರೊಬೆಷನರಿ ಮುಖ್ಯ ಪರೀಕ್ಷೆಗಳು ಸೆ. 18ರಿಂದ ಆರಂಭಗೊಳ್ಳಲಿದ್ದು, ಸೋಮವಾರದಿಂದ ಮುಖ್ಯ ಪರೀಕ್ಷೆ ತೆಗೆದು ಕೊಂಡಿದ್ದ ಅಭ್ಯರ್ಥಿಗಳಿಗೆ ಪ್ರವೇಶ ಪತ್ರ ಡೌನ್ ಲೋಡ್ ಮಾಡಿಕೊಳ್ಳುವುದಕ್ಕೆ ಅವಕಾಶ ಕಲ್ಪಿಸಿದೆ. ಮಂಗಳವಾರ ಮಧ್ಯಾಹ್ನ ಬಿಡುಗಡೆ ಮಾಡಲಾದ ಅನರ್ಹರ ಪಟ್ಟಿಯಲ್ಲಿ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದಿಂದ ದೂರ ಶಿಕ್ಷಣ ಪದವಿ ಗಳಿಸಿದ ಅಭ್ಯರ್ಥಿಗಳನ್ನು ಅನರ್ಹರೆಂದು ಪರಿಗಣಿಸಿರುವುದು ಅಭ್ಯರ್ಥಿಗಳಿಗೆ ಬರ ಸಿಡಿಲು ಬಡಿದಂತಾಗಿದೆ. ವಿವಿಯ ತಪ್ಪಿಗೆ ಅಭ್ಯರ್ಥಿಗಳ ಭವಿಷ್ಯ ಮಸುಕಾಗಿದೆ.
ಕರ್ನಾಟಕ ಗೆಜೆಟೆಡ್ ಪ್ರೊಬೆಷನರಿ (ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕಾತಿ) ಪರೀಕ್ಷೆಗೆ 2015ರ ಜನವರಿ 22ರಂದು ನೋಟಿಫಿಕೇಷನ್ ಹೊರಡಿಸಲಾಗಿತ್ತು. ಏಪ್ರಿಲ್ ತಿಂಗಳಲ್ಲಿ ಪೂರ್ವಭಾವಿ ಪರೀಕ್ಷೆ ನಡೆದು, ಒಂದು ತಿಂಗಳ ನಂತರ ಫಲಿತಾಂಶ ಪ್ರಕಟಗೊಂಡಿತ್ತು ಸೆ. 18ರಂದು ಮುಖ್ಯ ಪರೀಕ್ಷೆಯ ದಿನಾಂಕ ನಿಗದಿ ಪಡಿಸಿದೆ. ಪರೀಕ್ಷೆಗೆ ಇನ್ನು ಕೇವಲ 10 ದಿನಗಳು ಬಾಕಿ ಇರುವಾಗಲೇ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯ-ದಿಂದ 2013-14 ಮತ್ತು 2014-15ನೇ ಸಾಲಿನಲ್ಲಿ ದೂರ ಶಿಕ್ಷಣ ಪದವಿ ಗಳಿಸಿದವರಿಗೆ ಮುಖ್ಯ ಪರೀಕ್ಷೆ ಬರೆಯದಂತೆ ಅನರ್ಹರ ಪಟ್ಟಿಗೆ ಸೇರಿಸಿದೆ. ಯುಜಿಸಿ ಮತ್ತು ಕರ್ನಾಟಕ ಮುಕ್ತ ವಿವಿ ನಡುವಿನ ತಿಕ್ಕಾಟದಲ್ಲಿ ವಿದ್ಯಾರ್ಥಿಗಳು
ಅತಂತ್ರರಾಗಿದ್ದಾರೆ,.