ಬೆಂಗಳೂರು: ಮಹಾಲೇಖಪಾಲರ (ಸಿಎಜಿ) ವರದಿ ಒಮ್ಮೆ ಸಂಸತ್ ಅಥವಾ ವಿಧಾನಸಭೆಯಲ್ಲಿ ಚರ್ಚೆಗೆ ಸ್ವೀಕಾರ ಆದ ಬಳಿಕ ಅದು ಶಾಸನಸಭೆಯ ಸ್ವತ್ತು ಎನಿಸಿಕೊಳ್ಳುತ್ತದೆ. ಶಾಸನಸಭೆಯಲ್ಲಿ ಅದರ ಚರ್ಚೆ ಮುಂದುವರಿದಿರುವ ಸಮಯದಲ್ಲೇ ಸಾರ್ವಜನಿಕವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಸಹಾಯಕ ಸಾಲಿಸಿಟರ್ ಕೃಷ್ಣ ಎಸ್.ದೀಕ್ಷಿತ್ ಹೈಕೋರ್ಟ್‍ಗೆ ತಿಳಿಸಿದರು.
ಸಿಎಜಿ ವರದಿ ಅನುಸಾರ ಸಂಸದ ಬಿ.ಎಸ್. ಯಡಿಯೂರಪ್ಪ ವಿರುದ್ಧ ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಯನ್ನು ನ್ಯಾ.ರತ್ನಕಲಾ ಅವರಿದ್ದ ಏಕಸದಸ್ಯ ಪೀಠವು ಶುಕ್ರವಾರ ವಿಚಾರಣೆ ನಡೆಸಿತು.
ಯಡಿಯೂರಪ್ಪ ಪರ ಹಾಜರಾಗಿದ್ದ ಹಿರಿಯ ವಕೀಲರಾದ ಸಿ.ವಿ. ನಾಗೇಶ್ ಮತ್ತು ಅಶೋಕ ಹಾರನಹಳ್ಳಿ ಅವರು, ವಾಸ್ತವದಲ್ಲಿ ಸಿಎಜಿ ವರದಿ ಅನುಸಾರ ಕ್ರಿಮಿನಲ್ ಮೊಕದ್ದಮೆಗಳನ್ನು
ದಾಖಲಿಸಲು ಸಾಧ್ಯವಿಲ್ಲ. ಈ ಪ್ರಕರಣದಲ್ಲಿ ಸಿಎಜಿ ಪಾತ್ರ ಏನು ಎಂಬುದನ್ನು ಸಹಾಯಕ ಸಾಲಿಸಿಟರ್ ಜನರಲ್ ಅವರೇ ವಿವರಿಸುತ್ತಾರೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಸಹಾಯಕ ಸಾಲಿಸಿಟರ್ ಜನರಲ್ ಕೃಷ್ಣ ಎಸ್. ದೀಕ್ಷಿತ್ ಅವರು, ಈ ಪ್ರಕರಣದಲ್ಲಿ ಕೇಂದ್ರವು ಯಾರ ಪರವೂ ಇಲ್ಲ. ಪ್ರತಿವಾದಿಯೂ ಅಲ್ಲ. ಆದಾಗ್ಯೂ ಇಲ್ಲಿ ಸಿಎಜಿ ಪಾತ್ರದ ಬಗೆಗಷ್ಟೇ ನ್ಯಾಯಪೀಠಕ್ಕೆ ವಿವರಣೆ ನೀಡುತ್ತಿದ್ದೇನೆ ಎಂದು ಹೇಳಿದರು. ಸಂವಿಧಾನದ 151ನೇ ಅನುಚ್ಛೇದದ ಅನುಸಾರ ಸಿಎಜಿ ವರದಿಯನ್ನು ರಾಷ್ಟ್ರಪತಿ ಅಥವಾ ರಾಜ್ಯಪಾಲರಿಗೆ ನೀಡಲಾಗುತ್ತದೆ. ಈ ವರದಿಯನ್ನು ಸಂಸತ್ ಅಥವಾ ವಿಧಾನಸಭೆಯಲ್ಲಿ ಮಂಡಿಸಲಾಗುತ್ತದೆ.
ಒಮ್ಮೆ ಈ ಕುರಿತು ಶಾಸನಸಭೆಯಲ್ಲಿ ಚರ್ಚೆ ಆರಂಭವಾದ ಮೇಲೆ ಅದನ್ನು ಹೊರಗಿನ ಯಾರಿಗೇ ಆಗಲಿ ಕೊಡಲು ಬರುವುದಿಲ್ಲ. ಈ ಸಂಬಂಧ ದೆಹಲಿ, ಸಿಕ್ಕಿಂ ಹಾಗೂ ಗುವಾಹಟಿ ಹೈಕೋರ್ಟ್‍ಗಳು ಸಿಎಜಿ ಸ್ವಾಯತ್ತತೆಯ ಬಗ್ಗೆ ಸ್ಪಷ್ಟವಾಗಿ ವಿವರಿಸಿವೆ ಎಂದರು. ನಂತರ ಪ್ರಕರಣವನ್ನು 15ಕ್ಕೆ ಮುಂದೂಡಲಾಯಿತು.
ಮತ್ತೊಂದು ಅರ್ಜಿ: ಭೂ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ರಾಜ್ಯಪಾಲ ಭಾರದ್ವಾಜ್ ಅವರು ವಿಚಾರಣೆಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಯಡಿಯೂರಪ್ಪ ಸಲ್ಲಿಸಿದ್ದ ಮತ್ತೊಂದು ಅರ್ಜಿಯ ವಿಚಾರಣೆಯನ್ನು ಅಕ್ಟೋಬರ್ 1ಕ್ಕೆ ಮುಂದೂಡಲಾಗಿದೆ.