ಬೆಂಗಳೂರು: ಮೇಯರ್ ಮಂಜುನಾಥ ರೆಡ್ಡಿ ಕಳೆದ ಬಾರಿಯ ಬಿಬಿಎಂಪಿ ಆಡಳಿತದಲ್ಲಿ ವಿರೋಧ ಪಕ್ಷದ ನಾಯಕನಾಗಿ ಕೆಲಸ ಮಾಡಿದ್ದರು. 1996ರ ಬಿಬಿಎಂಪಿ ಚುನಾವಣೆಯಲ್ಲಿ ಮಡಿವಾಳ ವಾರ್ಡ್ ನಿಂದ ವಿಜಯ ಸಾಧಿಸಿ ಮೊದಲ ಬಾರಿಗೆ ಪಾಲಿಕೆ ಮೆಟ್ಟಿಲು ಹಿತ್ತದ್ದರು.
ನಂತರ 2001ರಲ್ಲಿ ಹಾಗೂ 2010ರಲ್ಲಿ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿದ್ದರು. ಹೀಗಾಗಿ ಪಾಲಿಕೆಯಲ್ಲಿ ಚುನಾಯಿತ ಪ್ರತಿನಿಧಿಯಾಗಿ ಅವರಿಗೆ ಒಟ್ಟು 15 ವರ್ಷಗಳ ದೀರ್ಘ ಅನುಭವವಿದೆ.
ರಾಜಕೀಯ ಪಥ: 1983ರಲ್ಲಿ ವಿದ್ಯಾರ್ಥಿ ಸಂಘಟನೆಯಾದ ಎನ್‍ಎಸ್‍ಯುಐ ಮೂಲಕ ಕಾಂಗ್ರೆಸ್ ಪಕ್ಷದ ಸದಸ್ಯರಾಗಿ ರಾಜಕೀಯ ಚಟುವಟಿಕೆಗಳಲ್ಲಿ ಪಾಲ್ಗೊಂಡರು. ನಂತರ ಪಾಲಿಕೆ
ಸದಸ್ಯ ರಾಗಿ ಆಯ್ಕೆಯಾದಾಗ ಬಿಎಂಪಿಯಲ್ಲಿ ಚುನಾಯಿತ ಸದಸ್ಯರ ಕಾರ್ಯದರ್ಶಿ ಹಾಗೂ ನೇಮಕಾತಿ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಬಳಿಕ ಲೆಕ್ಕಪತ್ರ ಸ್ಥಾಯಿ ಸಮಿತಿಯ ಸದಸ್ಯ, ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿಯ ಸದಸ್ಯ ಹಾಗೂ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ಬಿಎಂಪಿಯಲ್ಲಿ ವಿರೋಧ ಪಕ್ಷದ ಉಪನಾಯಕ ನಾಗಿಯೂ ಅನುಭವ ಪಡೆದರು.
ಕಾಂಗ್ರೆಸ್ ಪಕ್ಷದಲ್ಲೂ ಮೇಯರ್ ಮಂಜುನಾಥ್ ರೆಡ್ಡಿ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡಿದ್ದಾರೆ. ಮೊದಲು ರಾಜಕೀಯಕ್ಕೆ ಇಳಿದಾಗ ಜಯನಗರ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದರು. 1984ರಿಂದ ನಡೆದ ಸಾರ್ವತ್ರಿಕ ಚುನಾವಣೆಗಳಲ್ಲಿ, ರಾಜ್ಯದಲ್ಲಿ ನಡೆದ ಉಪಚುನಾವಣೆ, ವಿಧಾನಪರಿಷತ್, ತಾಲೂಕು ಬೋರ್ಡ್, ಜಿಲ್ಲಾ ಪರಿಷತ್ ಚುನಾವಣೆಗಳಲ್ಲಿ ಪಕ್ಷದ ಪರವಾಗಿ ಕೆಲಸ ಮಾಡಿದ್ದರು. 2001ರಿಂದ 2006ರವರೆಗಿನ ಅವಧಿಯಲ್ಲಿ ಬಿಬಿಎಂಪಿಯಲ್ಲಿ ಪಕ್ಷದ ವೀಕ್ಷಕರಾಗಿ ಕೆಲಸ ಮಾಡಿದ್ದರು.