ಬೆಂಗಳೂರು: ಕಳೆದ ನಾಲ್ಕು ದಿನಗಳಿಂದ ಎಸ್. ಬಿಂಗಿಪುರಕ್ಕೆ ಕಸ ಸಾಗಣೆ ನಿಂತಿದ್ದು, ಭಾನುವಾರ ಮೇಯರ್ ಮಂಜುನಾಥ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.
ದಕ್ಷಿಣ ಭಾಗದ ಕಸ ಬಿಂಗಿಪುರ ಕಸ ಘಟಕಕ್ಕೆ ವಿಲೇವಾರಿಯಾಗುತ್ತದೆ. ಇತ್ತೀಚೆಗೆ ಲಕ್ಷ್ಮಿಪುರ ಕ್ವಾರಿಯಲ್ಲಿ ಕಸ ಸಾಗಣೆ ನಿಂತಿದ್ದರಿಂದ ಈ ಘಟಕದ ಮೇಲೆ ಒತ್ತಡ ಹೆಚ್ಚಿದೆ. ಇಲ್ಲಿ ಕುಡಿಯುವ ನೀರು, ಆಸ್ಪತ್ರೆ, ಶಾಲೆ ಸೇರಿದಂತೆ ಮೂಲಸೌಕರ್ಯ ಕಲ್ಪಿಸಲಾಗುವುದು ಎಂದು ಭರವಸೆ ನೀಡಲಾಗಿತ್ತು. ಆದರೆ, ಚುನಾವಣೆಯಲ್ಲೇ ಎಲ್ಲರೂ ನಿರತರಾಗಿ ಭರವಸೆ ಮರೆತಿದ್ದರಿಂದ ಕಸ ಹಾಕದಂತೆ ವಿರೋಧ ವ್ಯಕ್ತವಾಗಿದೆ. ಇದರಿಂದ ಕಸ ನಗರದಲ್ಲೇ ಉಳಿಯುತ್ತಿದ್ದು, ರಸ್ತೆಗಳಲ್ಲೇ ಕಸ ಹಾಕಲಾಗಿದೆ. ಆರು ಪರ್ಯಾಯ ಘಟಕಗಳನ್ನು ಇನ್ನೂ ಪೂರ್ಣವಾಗಿ ಆರಂಭವಾಗದಿರುವುದರಿಂದ ಕಸದ ಸಮಸ್ಯೆ ಮತ್ತಷ್ಟು ಹೆಚ್ಚಿದೆ. ಮೇಯರ್ ಆಗಿ ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಮಂಜುನಾಥ ರೆಡ್ಡಿ ಅವರಿಗೆ ಕಸದ ಸವಾಲು ಎದುರಾಗಿದೆ. ಹೀಗಾಗಿ ಭಾನುವಾರ ಭೇಟಿ ನೀಡಿ ಸ್ಥಳೀಯರ ಸಮಸ್ಯೆಗಳನ್ನು ಅವರು ಆಲಿಸಲಿದ್ದಾರೆ.
ತುರ್ತು ಸೇವೆ ಎಂದು ಪರಿಗಣನೆ: ಶನಿವಾರ ದಕ್ಷಿಣ ವಲಯದ ಅಧಿಕಾರಿಗಳ ಜೊತೆ ಸಮಾಲೋಚಿಸಿದ ಅವರು, ಕಸ ಸಮಸ್ಯೆ ಬಗ್ಗೆ ಹಾಗೂ ಭೇಟಿ ನೀಡಿದಾಗ ಸ್ಥಳೀಯರಿಗೆ ಏನು ತಿಳಿಸಬೇಕು ಎಂಬ ಬಗ್ಗೆ ಚರ್ಚಿಸಿದ್ದಾರೆ. `ಬಿಂಗಿಪುರದಲ್ಲಿನ ಕಸ ಸಮಸ್ಯೆ ಬಗ್ಗೆ ಅಧಿಕಾರಗಳೊಂದಿಗೆ ಚರ್ಚಿಸಿದ್ದೇನೆ. ಆದರೆ ಇದು ಸ್ಥಳೀಯರ ತಪ್ಪು ಎನ್ನಲು ಸಾಧ್ಯವಿಲ್ಲ.
ಇಷ್ಟು ದಿನ ಚುನಾವಣೆಯ ಕಾರಣದಿಂದ ಅಧಿಕಾರಿಗಳು ಇಲ್ಲಿನ ಸಮಸ್ಯೆ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದರು. ಚುನಾವಣೆಯ ಕಾರಣದಿಂದ ಇಲ್ಲಿನ ಕಾಮಗಾರಿಗಳು ತಡವಾಗಿದ್ದು, ಜನರ ಕೋಪಕ್ಕೆ ಕಾರಣವಾಗಿದೆ. ಈ ಪ್ರದೇಶದ ಅಭಿವೃದ್ಧಿಗೆ ರು.15 ಕೋಟಿ ಬಿಡುಗಡೆಯಾಗಿದ್ದು, ಕಾಮಗಾರಿ ಆರಂಭಿಕ ಹಂತದಲ್ಲಿದೆ. ಇವನ್ನೆಲ್ಲ ತುರ್ತು ಸೇವೆಗಳೆಂದು ಪರಿಗಣಿಸಿ ಕಾರ್ಯಾರಂಭಕ್ಕೆ ಒತ್ತು ನೀಡಲಾಗುವುದು. ಇಲ್ಲಿನ ಸ್ಥಳೀಯ ಶಾಸಕ ಕೃಷ್ಣಪ್ಪ ಹಾಗೂ ಪಾಲಿಕೆ ಸದಸ್ಯ ಆಂಜನಪ್ಪ ಅವರೊಂದಿಗೂ ಮಾತುಕತೆ ನಡೆಸಿದ್ದೇನೆ. ಭಾನುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ' ಎಂದು ಮೇಯರ್ ಮಂಜುನಾಥ ರೆಡ್ಡಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ರಾಮಲಿಂಗಾ ರೆಡ್ಡಿ, ಬಿಂಗಿಪುರದ ಕಸದ ಸಮಸ್ಯೆ ನಿವಾರಣೆಗೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಕಸ ವಿಲೇವಾರಿ ವಿಳಂಬವಾಗಿತ್ತು. ಕಸ ಸಮಸ್ಯೆಗೆ ಸಂಪೂರ್ಣ ಒತ್ತು ನೀಡುವ ನಿಟ್ಟಿನಲ್ಲಿ 7 ನೂತನ ವಿಲೇವಾರಿ ಘಟಕಗಳ ಪೈಕಿ 3 ಕಾರ್ಯಾರಂಭಿಸಿದ್ದು, ಇನ್ನುಳಿದ ನಾಲ್ಕು ಘಟಕಗಳಿಗೆ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಕೋರಲಾಗಿದೆ ಎಂದು ತಿಳಿಸಿದರು.