ಬೆಂಗಳೂರು: ಭಿಂಗಿಪುರ ಕಸದ ಸಮಸ್ಯೆಗೆ ಇನ್ನೊಂದು ತಿಂಗಳಲ್ಲಿ ಬಗೆಹರಿಯುವ ಲಕ್ಷಣವಿಲ್ಲ. ಆದರೆ, ಸಮಸ್ಯೆಯನ್ನು ತಾತ್ಕಾಲಿಕವಾಗಿ ಪರಿಹರಿಸುವ ನಿಟ್ಟಿನಲ್ಲಿ ಸರ್ಕಾರ
ಪ್ರಯತ್ನವನ್ನಂತೂ ಆರಂಭಿಸಿದ್ದು, ಗ್ರಾಮಸ್ಥರ ಮನವೊಲಿಸಲು ಕ್ರಮಕ್ಕೆ ಮುಂದಾಗಿದೆ.
ಈ ಕುರಿತಂತೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿರುವ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ, ಭಿಂಗಿಪುರದಲ್ಲಿ ಚುನಾವಣೆಗೆ ಮುಂಚೆ ಸಮಸ್ಯೆಯಾಗಿತ್ತು. ಎಂಜಿನಿಯರ್‍ಗಳು ಸಮಸ್ಯೆ ನೋಡಲಿಲ್ಲ. ಅಲ್ಲಿನ ಜನ ಬೇಸರಗೊಂಡಿದ್ದಾರೆ ಎಂದರು.
ಇನ್ನೊಂದು ತಿಂಗಳಲ್ಲಿ ಹೊಸೂರು ರಸ್ತೆಯಲ್ಲಿ ಕಸ ವಿಲೇವಾರಿ ಘಟಕ ಆರಂಭವಾಗುತ್ತಿದ್ದು, ಅಲ್ಲಿಯವರೆಗೆ ಭಿಂಗಿಪುರದಲ್ಲಿ ಕಸ ವಿಲೇವಾರಿ ಮಾಡಲಾಗುತ್ತದೆ. ಈ ಸಂಬಂಧ ಗ್ರಾಮಸ್ಥರೊಂದಿಗೆ ಚರ್ಚಿಸುವ ಕೆಲಸ ನಡೆದಿದೆ ಎಂದು ಹೇಳಿದ ಅವರು, ಭಿಂಗಿಪುರ ಭಾಗದ 6-7 ಹಳ್ಳಿಗಳಿಗೆ ಕುಡಿವ ನೀರು, ರಸ್ತೆ ಸೇರಿದಂತೆ ವಿವಿಧ ಕೆಲಸಕಾರ್ಯಗಳನ್ನು ಮಾಡಲು 15 ಕೋಟಿ ರೂಪಾಯಿ ಮಂಜೂರಾಗಿದೆ. ಈ ವಿಚಾರವನ್ನು ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಡಲಾಗುತ್ತದೆ ಎಂದು ತಿಳಿಸಿದರು.
ಭಿಂಗಿಪುರಕ್ಕೂ ಕ್ಯಾಂಪಿಂಗ್: ಮಂಡೂರಿನಲ್ಲಿ ಕಸದ ಹಾಕಿದ ಪ್ರದೇಶದಲ್ಲಿ ಕ್ಯಾಪಿಂಗ್ ಮಾಡಿದಂತೆ ಭಿಂಗಿಪುರದಲ್ಲೂ ಕ್ಯಾಪಿಂಗ್ ಮಾಡಲು ಉದ್ದೇಶಿಸಲಾಗಿದೆ. ಇದರಿಂದ ಸೊಳ್ಳೆ ಬಾರದಂತೆ, ವಾಸನೆ ಬಾರದಂತೆ, ಕಸ ಹೊರಬರದಂತೆ ತಡೆಯಬಹುದಾಗಿದೆ. ಅದಲ್ಲದೇ ಶಾಶ್ವತವಾಗಿ ಕಸ ತೆಗೆಯುವ ಯೋಜನೆ ಮಾಡಬೇಕಾಗಿದೆ. ಈ ಬಗ್ಗೆ ಸ್ಥಳೀಯರೊಂದಿಗೆ ಮಾತುಕತೆ ಮಾಡಲಾಗುತ್ತದೆ ಎಂದು ಹೇಳಿದರು.
ಕಳೆದ ಮೂರು ನಾಲ್ಕು ದಿನಗಳಿಂದ ಭಿಂಗಿಪುರದ ಗ್ರಾಮಸ್ಥರು ಕಸ ತುಂಬಿ ಬರುವ ಲಾರಿಗಳನ್ನು ತಡೆದು ನಿಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ಮನವಿ ಮಾಡಿದರೂ ಸಮಸ್ಯೆ ಬಗೆಹರಿಸದ ಹೊರತು ಕಸ ಸುರಿಯಲು ಅವಕಾಶ ನೀಡುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರ ಮನವೊಲಿಸಲು ಬಿಬಿಎಂಪಿ ಮತ್ತು ಸರ್ಕಾರ ಯತ್ನಿಸುತ್ತಿವೆ.