ಬೆಂಗಳೂರು: ಗಣೇಶೋತ್ಸವ ಹಾಗೂ ಬಕ್ರೀದ್ ಹಬ್ಬಕ್ಕೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್. ಎಸ್. ಮೇಘರಿಕ್ ತಿಳಿಸಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಆಯುಕ್ತರು, ಭದ್ರತೆಗಾಗಿ ನಗರ ಪೊಲೀಸರು, ಗೃಹರಕ್ಷಕ ಸಿಬ್ಬಂದಿ, ಕೆಎಸ್‍ಆರ್‍ಪಿ, ಸಿಎಆರ್ ಸಿಬ್ಬಂದಿ ಸೇರಿದಂತೆ ಒಟ್ಟು ರು.16 ಸಾವಿರ ಪೊಲೀಸರನ್ನು ನಿಯೋಜಿಸಲಾಗುತ್ತದೆ. ಈ ಬಾರಿ ಕೇಂದ್ರದ ಪಡೆಗಳು ಲಭ್ಯವಿರುವುದಿಲ್ಲ. ಬಿಹಾರ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರದಿಂದ ಭದ್ರತಾ ಪಡೆಗಳು ಲಭ್ಯವಿರುವುದಿಲ್ಲ ಎನ್ನುವ ಮಾಹಿತಿ ಬಂದಿದೆ. ಆದರೆ, ನಗರದಲ್ಲಿ ಲಭ್ಯವಿರುವ ಪೊಲೀಸರು ಬಳಸಿಕೊಂಡು ಎಲ್ಲಾ ರೀತಿಯಿಂದಲೂ ಸೂಕ್ತ ಬಂದೋಬಸ್ತ್ ಕೈ ಗೊಳ್ಳಲಾಗುವುದು ಎಂದರು.
ಮೊದಲ 11 ದಿನದಲ್ಲೇ ಮುಗಿಸಿ: ಗಣೇಶ ಉತ್ಸವವನ್ನು 11 ದಿನಗಳಿಗೆ ಒಳಗೆ ಮುಕ್ತಾಯ ಮಾಡುವುದು ಸೂಕ್ತ. ಅಂದರೆ, ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಮೊದಲ 11 ದಿನದಲ್ಲೇ ಮುಗಿಯಲಿ. ನಂತರ ನಡೆವ ಗಣೇಶ ಉತ್ಸವ, ಮೆರವಣಿಗೆಗಳಿಗೆ ಪೊಲೀಸರ ಭದ್ರತೆ, ಸಹಕಾರ ಸಿಗುವುದು ಕಷ್ಟ. ವಿವಿಧ ಸಂಘಟನೆಗಳು ಗಣೇಶ ಪ್ರತಿಷ್ಠಾಪನೆ ಮಾಡುವಾಗ ವಾಹನಗಳ ಸಂಚಾರಕ್ಕೆ ಸಾರ್ವಜನಿಕರ ಓಡಾಟಕ್ಕೆ ಧಕ್ಕೆ ಉಂಟಾಗದಂತೆ ನೋಡಿಕೊಳ್ಳಬೇಕೆಂದು ಎಂದು ನಗರ ಪೊಲೀಸ್ ಆಯುಕ್ತರು ಸಲಹೆ ನೀಡಿದರು.
ಅನುಮತಿ ಕಡ್ಡಾಯ: ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಸ್ಥಳೀಯ ಪೊಲೀಸರ ಅನುಮತಿ ಪಡೆಯಬೇಕು. ಸಂಘದ ಪದಾಧಿಕಾರಿಗಳು, ಸದಸ್ಯರು ಹೆಸರು ಮತ್ತು ದೂರವಾಣಿ ಸಂಖ್ಯೆಯನ್ನು ಗಣೇಶ ಕೂರಿಸಿರುವ ಚಪ್ಪರದ ಬಳಿ ನಮೂದಿಸಬೇಕು ಹಾಗೂ ಅದನ್ನು ಪೆÇಲೀಸರಿಗೆ ನೀಡಬೇಕು. ದಿನದ 24 ಗಂಟೆಗಳ ಕಾಲ ಗಣೇಶ ಪ್ರತಿಷ್ಠಾಪಿಸಿರುವ ಜಾಗದಲ್ಲಿ ಸ್ವಯಂಸೇವಕರನ್ನು ನೇಮಿಸಬೇಕು.
ಬೆ.6ರಿಂದ ರಾತ್ರಿ 10 ಗಂಟೆವರೆಗೆ ಮಾತ್ರ ಧ್ವನಿವರ್ಧಕ ಬಳಸಬೇಕು. ಗಣೇಶ ಪ್ರತಿಷ್ಠಾಪನೆ ಹೆಸರಿನಲ್ಲಿ ಸಾರ್ವಜನಿಕರು, ವ್ಯಾಪಾರಿಗಳಿಂದ ಹಣ ಸುಲಿಗೆ ಮಾಡಬಾರದು. ಗಣಪತಿ ವಿಸರ್ಜನೆ ಮಾರ್ಗದ ಬಗ್ಗೆ ಮುಂಚಿತವಾಗಿ ಪೊಲೀಸರಿಗೆ ತಿಳಿಸಬೇಕು ಎಂದು ಮೇಘರಿಕ್ ಸ್ಪಷ್ಟಪಡಿಸಿದರು. ಗಣೇಶೋತ್ಸವ ಹಾಗೂ ಬಕ್ರೀದ್ ಹಬ್ಬಗಳು ಈ ಬಾರಿ ಒಟ್ಟೊಟ್ಟಿಗೆ ಬಂದಿರುವುದರಿಂದ ನಗರದಲ್ಲಿ ಎಲ್ಲಾ ಸಮುದಾಯದವರು ಶಾಂತಿಯುತವಾಗಿ ಹಬ್ಬ ಆಚರಿಸಬೇಕು ಎಂದು ಅವರು ಮನವಿ ಮಾಡಿದರು.