ಬೆಂಗಳೂರು: ಪಾದಚಾರಿ ಮಾರ್ಗ, ಚರಂಡಿ ಹಾಗೂ ರಸ್ತೆ ಬದಿ ಒತ್ತುವರಿಯನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಬೇಕು ಎಂದು ಮೇಯರ್ ಮಂಜುನಾಥ ರೆಡ್ಡಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಶನಿವಾರ ಅವರು ಬನಶಂಕರಿ, ಗಿರಿನಗರ, ಪದ್ಮನಾಭನಗರ, ಸಿದ್ಧಯ್ಯ ರಸ್ತೆ ಸುತ್ತಮುತ್ತ ಸಾಮೂಹಿಕ ಸ್ವಚ್ಛತಾ ಕಾರ್ಯದ ಪರಿಶೀಲನೆ ನಡೆಸಿದರು. ಸಿದ್ದಯ್ಯ ರಸ್ತೆಯಲ್ಲಿ ಪರಿಶೀಲನೆ ನಡೆಸಿದಾಗ ವ್ಯಾಪಾರಿಗಳು ರಸ್ತೆ ಹಾಗೂ ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡು ವ್ಯಾಪಾರ ಮಾಡುತ್ತಿದ್ದುದು ಪತ್ತೆಯಾಯಿತು.
ಇದರಿಂದ ಸಾರ್ವಜನಿಕರ ಹಾಗೂ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತಿತ್ತು. ಹೀಗಾಗಿ ಪಾದಚಾರಿ ಮಾರ್ಗ ರಸ್ತೆಬದಿಯಲ್ಲಿ ವ್ಯಾಪಾರಿಗಳು ಮಾಡಿಕೊಂಡ ಒತ್ತುವರಿಯನ್ನು ಕೂಡಲೇ ತೆರವುಗೊಳಿಸಬೇಕು. ನಗರದ ಯಾವುದೇ ಭಾಗದಲ್ಲಿ ಸಾರ್ವಜನಿಕರು ಸಂಚರಿಸುವ ಸ್ಥಳವನ್ನು ಒತ್ತುವರಿ ಮಾಡಿಕೊಳ್ಳಲು ಬಿಡಬಾರದು ಎಂದು ಸೂಚಿಸಿದರು.
ವ್ಯಾಪಾರಿಗಳ ವಾಗ್ವಾದ: ವ್ಯಾಪಾರ ವಹಿವಾಟು ಸ್ಥಗಿತಗೊಳಿಸಬೇಕು ಎಂದು ಸೂಚಿಸಿದ್ದರಿಂದ ಆಕ್ರೋಶಗೊಂಡ ವ್ಯಾಪಾರಿಗಳು ಅಧಿಕಾರಿಗಳೊಂದಿಗೆ ವಾದ ಮಾಡಿದರು. ಮಧ್ಯಪ್ರವೇಶಿಸಿದ ಮೇಯರ್ ಮಂಜುನಾಥರೆಡ್ಡಿ, ಪಾಲಿಕೆಯ ಕಾರ್ಯಕ್ಕೆ ಸಹಕಾರ ನೀಡಬೇಕು.
ಸ್ವಚ್ಛತಾ ಕಾರ್ಯ ಸಾರ್ವಜನಿಕರಿಗಾಗಿಯೇ ಮಾಡಲಾಗುತ್ತದೆ. ಜನರು ಪಾಲಿಕೆಯೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮೂಹಿಕ ಸ್ವಚ್ಛತಾ ಕಾರ್ಯದಿಂದ ಪಾಲಿಕೆಗೆ ಆರ್ಥಿಕ ಹೊರೆಯಾಗುವುದಿಲ್ಲ.
ಉಪವಿಭಾಗೀಯ ಮಟ್ಟದಲ್ಲಿರುವ ಎಲ್ಲ ಸಿಬ್ಬಂದಿ, ವಾಹನ ಒಂದುಗೂಡಿಸಿ ಆಯ್ದ ರಸ್ತೆಗಳಲ್ಲಿ ಸ್ವಚ್ಛತೆ ಕೈಗೊಳ್ಳುತ್ತಾರೆ. ಪ್ರತಿ ವಾರ ಸ್ವಚ್ಛತಾ ಕಾರ್ಯ ನಡೆದರೆ ರಸ್ತೆಗಳು ಸ್ವಚ್ಛವಾಗಿರುತ್ತವೆ. ಕಳೆದ ವಾರ ದಕ್ಷಿಣ ಭಾಗದಲ್ಲಿ ಉಂಟಾದ ಕಸದ ಸಮಸ್ಯೆಯನ್ನು ಈಗ ಬಗೆಹರಿಸಲಾಗಿದೆ.
ಹಬ್ಬದ ಕಸ ಕೂಡಾ ತೆರವುಗೊಳಿಸಲಾಗುತ್ತಿದೆ. ಇನ್ನೆರಡು ದಿನಗಳಲ್ಲಿ ಪರಿಸ್ಥಿತಿ ಎಂದಿನಂತಾಗಲಿದೆ. ಜೊತೆಗೆ ಶೀಘ್ರದಲ್ಲಿ ಹೊಸ ಘಟಕ ಆರಂಭವಾಗುವುದರಿಂದ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದರು.