ಧಾರವಾಡ: ಸಂಶೋಧಕ ಡಾ.ಎಂ.ಎಂ. ಕಲಬುರ್ಗಿ ಹಾಗೂ ವಿಚಾರವಾದಿ ಗೋವಿಂದ ಪಾನ್ಸರೆ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಎನ್ನಲಾಗಿರುವ ಸಾಂಗ್ಲಿಯ ರುದ್ರಪಾಟೀಲ ಇನ್ನೂ ಪತ್ತೆಯಾಗಿಲ್ಲ. ರಾಷ್ಟ್ರೀಯ ತನಿಖಾ ಸಂಸ್ಥೆ ರುದ್ರಪಾಟೀಲನಿಗಾಗಿ ಹುಡುಕಾಟ ಮುಂದುವರಿಸಿರುವಂತೆಯೇ ಸಮೀರ ಗಾಯಕವಾಡ ನನ್ನು ಮಹಾರಾಷ್ಟ್ರ ಎಸ್‍ಐಟಿ ಮತ್ತೊಮ್ಮೆ ಸುದೀರ್ಘ ವಿಚಾರಣೆಗೆ ಒಳಪಡಿಸಿದೆ.
ಏತನ್ಮಧ್ಯೆ, ಆರೋಪಿಗಳ ಪತ್ತೆಗಾಗಿ ಎಸ್‍ಐಟಿ ಹಾಗೂ ಕರ್ನಾಟಕದ ಸಿಐಡಿ ಪರಸ್ಪರ ಮಾಹಿತಿ ವಿನಿಮಯಕ್ಕೆ ಮುಂದಾಗಿವೆ. ಸದ್ಯ ಎಸ್‍ಐಟಿ ವಶದಲ್ಲಿರುವ ಬೆಳಗಾವಿ ಜಿಲ್ಲೆಯ ಸಂಕೇಶ್ವರದ ಸುನಿಲ್ ಜಾಧವ ಎಂಬಾತನನ್ನು ಹಸ್ತಾಂತ-ರಿಸುವಂತೆ ಸಿಐಡಿ ಅಧಿಕಾರಿಗಳು ಮಾಡಿಕೊಂಡ ಮನವಿಗೆ ಮಹಾರಾಷ್ಟ್ರ ಸರ್ಕಾರ ಅಧಿಕೃತ ಹಸಿರು ನಿಶಾನೆ ತೋರಿಸಿಲ್ಲ.
ಆದಾಗ್ಯೂ ಹಂತಕರನ್ನು ಹಿಡಿಯಲು ಈ ಮಾಹಿತಿ ವಿನಿಮಯ ನಿರ್ಧಾರಕ್ಕೆ ಎರಡೂ ತನಿಖಾ ತಂಡಗಳು ಸಿದ್ಧವಾಗಿವೆ. ವಿಚಾರವಾದಿಗಳಾದ ನರೇಂದ್ರ ದಾಬೋಲ್ಕರ್, ಪಾನ್ಸರೆ ಮತ್ತು ಡಾ. ಎಂ.ಎಂ. ಕಲಬುರ್ಗಿ ಹತ್ಯೆಯಲ್ಲಿ ಸಾಮ್ಯತೆ ಇರುವುದರಿಂದ ಹಂತಕರ ಸುಳಿವು, ಲಕ್ಷಣ, ಇತಿಹಾಸ ಇತ್ಯಾದಿ ಕುರಿತು ಅಧಿಕಾರಿಗಳು ಭಾನುವಾರ ಕೊಲ್ಹಾಪುರದಲ್ಲಿ ಮೊದಲ ಸುತ್ತಿನ ಮಾತುಕತೆ ನಡೆಸಿವೆ ಎಂದು ಮೂಲಗಳು ಹೇಳಿವೆ.
ಈ ಸಂದರ್ಭದಲ್ಲಿ ಕೊಲ್ಲಾಪುರಕ್ಕೆ ತೆರಳಿದ್ದ ಸಿಐಡಿ ತಂಡ ತನಗೆ ಬೇಕಿರುವ ಮಾಹಿತಿಯನ್ನು ಎಸ್‍ಐಟಿ ಮುಂದೆ ಮಂಡಿಸಿದೆ. ಈಗಾಗಲೇ ಕೆಲವು ಪ್ರಮುಖ ಮಾಹಿತಿಗಳನ್ನು ನೀಡಿರುವ ಎಸ್‍ಐಟಿ ಬರುವ ದಿನಗಳಲ್ಲಿ ತಾನು ನಡೆಸುವ ವಿಚಾರಣೆ ಅಂಶಗಳನ್ನು ಸಿಐಡಿ ಜೊತೆ ಹಂಚಿಕೊಳ್ಳಲು ಒಪ್ಪಿಕೊಂಡಿದೆ ಎಂದು ತಿಳಿದು ಬಂದಿದೆ.
ಚುರುಕಿನ ಹಾದಿ: ಸಮೀರ ಗಾಯಕವಾಡನ ಬೆನ್ನು ಹತ್ತಿ ಸಂಕೇಶ್ವರದಲ್ಲಿ ಜಾಧವ ಸಹೋದರರನ್ನು ವಶಕ್ಕೆ ತೆಗೆದುಕೊಂಡ ಎಸ್‍ಐಟಿಗೆ ಅಂತಾರಾಜ್ಯ ಪರಿಸರದಲ್ಲಿ ಈ ತನಿಖಾ ವ್ಯಾಪ್ತಿ ಒಳಗೊಂಡಿದ್ದರಿಂದ ಎಸ್ ಐಟಿಗೂ ಕೂಡಾ ಸಿಐಡಿಗೆ ಲಭಿಸಿರುವ ಮಾಹಿತಿಯನ್ನು ಪಡೆದುಕೊಳ್ಳುವುದು ಅಗತ್ಯವಾಗಿರುವುದರಿಂದ ಈ ಸಹಕಾರ ನೀಡಿದೆ.
ಜತೆಗೆ ತನ್ನ ವಶದಲ್ಲಿರುವ ಸುನೀಲ ಜಾಧವನನ್ನು ಸಿಐಡಿಗೆ ಒಪ್ಪಿಸುವ ಕುರಿತಂತೆ ತನ್ನ ಹಿರಿಯ ಅಧಿಕಾರಿಗಳಿಗೆ ಮನವರಿಕೆ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಪನ್ಸಾರೆ ಮತ್ತು ಕಲಬುರ್ಗಿ ಹತ್ಯೆ ಪ್ರಕರಣದ ತನಿಖೆ ಅತ್ಯಂತ ಚುರುಕಿನ ಹಾದಿ ಹಿಡಿದಂತಾಗಿದೆ. ಶಾರ್ಪ್ ಶೂಟರ್ ಪಟ್ಟಿ: ಈ ಮಧ್ಯೆ ಸಿಐಡಿ ಕರ್ನಾಟಕದ ಭೀಮಾತೀರ, ಹುಬ್ಬಳ್ಳಿ, ಬೆಳಗಾವಿ ಉಭಯ ರಾಜ್ಯಗಳ ಗಡಿ ಪ್ರದೇಶಗಳಲ್ಲಿನ ಶಾರ್ಪ್ ಶೂಟೌಟ್ ಪ್ರಕರಣಗಳ ಇತಿಹಾಸ ಕೆದಕಲಾಗುತ್ತಿದೆ.
ಈ ಸಂಗತಿಯನ್ನು ಕೂಡಾ ಎಸ್ ಐಟಿ ಜತೆಗೆ ಸಿಐಡಿ ವಿನಿಮಯ ಮಾಡಿಕೊಂಡಿದ್ದು, ಏಕಕಾಲಕ್ಕೆ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಈ ಸಂಗತಿಯನ್ನು ಕೂಡಾ ಎಸ್ ಐಟಿ ಜತೆಗೆ ಸಿಐಡಿ ವಿನಿಮಯ ಮಾಡಿಕೊಂಡಿದ್ದು, ಏಕಕಾಲಕ್ಕೆ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಶಾರ್ಪ್ ಶೂಟರ್ ಗಳ ಶೋಧ, ಬಂಧನ ಮತ್ತು ವಿಚಾರಣೆ ನಡೆಸಲು ಎಲ್ಲ ರೀತಿಯ ಸಿದ್ಧತೆಗಳು ನಡೆದಿವೆ. ಈ ವಿಚಾರಣೆಗೆ ಸಿಐಡಿ ಜತೆ ಪೊಲೀಸ್ ಇಲಾಖೆ ಸಕ್ರಿಯ ಭಾಗವಹಿಸುವಿಕೆ ನಡೆಯಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.