ಜಿಲ್ಲಾ ಸುದ್ದಿ

ಎಸ್ ಎಲ್ ಭೈರಪ್ಪ, ಕಪಿಲ್‍ದೇವ್‍ಗೆ ವಿಶ್ವಕರ್ಮ ಪ್ರಶಸ್ತಿ

Srinivasamurthy VN

ಬೆಂಗಳೂರು: ಸಾಹಿತಿ ಎಸ್.ಎಲ್. ಭೈರಪ್ಪ ಹಾಗೂ ಹಿರಿಯ ಕ್ರಿಕೆಟ್ ಪಟು ಕಪಿಲ್ ದೇವ್ ಅವರು 2015ನೇ ಸಾಲಿನ ವಿಶ್ವಕರ್ಮ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪ್ರಶಸ್ತಿಯು ರು.1ಲಕ್ಷ ಮೌಲ್ಯವುಳ್ಳ 24 ಕ್ಯಾರೆಟ್ ಶುದ್ಧ ಚಿನ್ನದಿಂದ ಮಾಡಲ್ಪಟ್ಟ ವಿಶ್ವಕರ್ಮರ ಚಿತ್ರ ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ. ಸೆ.27ರಂದು ಮಧ್ಯಾಹ್ನ 2ಗಂಟೆಗೆ ಬಸವನಗುಡಿಯ  ನ್ಯಾಷನಲ್ ಕಾಲೇಜು ಆವರಣದಲ್ಲಿ ನಡೆಯುವ 7ನೇ ರಾಜ್ಯಮಟ್ಟದ ವಿಶ್ವಕರ್ಮ ಜಯಂತಿ ಉತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅಖಿಲ ಕರ್ನಾಟಕ ವಿಶ್ವಕರ್ಮ  ಮಹಾಸಭಾದ ಅಧ್ಯಕ್ಷ ಕೆ.ಪಿ.ನಂಜುಂಡಿ ತಿಳಿಸಿದ್ದಾರೆ.

ಜಯಂತಿಗೆ 2ರಿಂದ 3ಲಕ್ಷ ವಿಶ್ವಕರ್ಮರು ಒಂದೆಡೆ ಸೇರಲಿದ್ದಾರೆ, ವಿಶ್ವಕರ್ಮ ಸಮಾಜದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಲಿದೆ. ಸರ್ಕಾರ ವಿಶ್ವಕರ್ಮ ಅಭಿವೃದ್ಧಿ ನಿಗಮ ಸ್ಥಾಪಿಸಿದೆ. ಆದರೆ  ಕೇವಲ ರು.15 ಕೋಟಿ ನೀಡಿದೆ. ಆದರೆ ರಾಜ್ಯದಲ್ಲಿ 30ಲಕ್ಷಕ್ಕಿಂತಲೂ ಹೆಚ್ಚು ವಿಶ್ವಕರ್ಮರಿದ್ದಾರೆ. ಅವರು ತೀರಾ ಕಷ್ಟದಲ್ಲಿದ್ದು, ಆರ್ಥಿಕವಾಗಿ ಹಿಂದುಳಿದಿದ್ದಾರೆ. ಅವರ ಅಭಿವೃದ್ಧಿಗೆ ರು.100ರಿಂದ  150ಕೋಟಿ ಅನುದಾನ ಮೀಸಲಿಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು. ಪ್ರತಿ ವರ್ಷ ಸೆ.17ರಂದು ವಿಶ್ವಕರ್ಮ ಜಯಂತಿ ನಡೆಯುತ್ತದೆ. ಆದರೆ ಈ ವರ್ಷ ಗಣೇಶ ಚತುರ್ಥಿಯಿಂದಾಗಿ  27ರಂದು ಹಮ್ಮಿಕೊಂಡಿದ್ದೇವೆ. ಆದರೆ ಪ್ರತಿ ವರ್ಷ ಸೆ.17ರಂದು ವಿಶ್ವಕರ್ಮ ಜಯಂತಿಯನ್ನಾಗಿ ಸರ್ಕಾರ ಘೋಷಿಸಿ ರಜೆ ಘೋಷಿಸಬೇಕು ಎಂದು ಮನವಿ ಮಾಡಿದರು.

ಈ ಬಾರಿ ವಿಶೇಷವಾಗಿ ಈದ್ಗಾ ಮೈದಾನದ ಮಲೈಮಹದೇಶ್ವರ ಸ್ವಾಮಿಯ ಸನ್ನಿಧಿಯಿಂದ 250 ಕೆಜಿ ತೂಕದ ಭಗವಾನ್ ವಿಶ್ವಕರ್ಮರ ಪುತ್ಥಳಿಗೆ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ಹರಿಸಿ  ನ್ಯಾಷನಲ್ ಕಾಲೇಜುವರೆಗೆ ಮೆರವಣಿಗೆಯಲ್ಲಿ ತೆರಳಲಾಗುತ್ತದೆ. ಸಮಾರಂಭವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

SCROLL FOR NEXT