ಜಿಲ್ಲಾ ಸುದ್ದಿ

ಉದ್ವಿಗ್ನ ಮುಧೋಳ ಶಾಂತ

Vishwanath S
ಮುಧೋಳ: ಗಣಪತಿ ವಿಸರ್ಜನೆ ವೇಳೆ ಕಲ್ಲು ತೂರಾಟದಿಂದ ಬುಧವಾರ ರಾತ್ರಿ ಉದ್ವಿಗ್ನಗೊಂಡಿದ್ದ ಮುಧೋಳ ಗುರುವಾರ ಶಾಂತವಾಗಿದೆ. 
ಬುಧವಾರ ರಾತ್ರಿ ಕಿಡಿಗೇಡಿಗಳ ಗುಂಪೊಂದು ಕಲ್ಲು ತೂರಾಟ ನಡೆಸಿದ್ದರಿಂದ ಆಕ್ರೋಶಿತ ಮತ್ತೊಂದು ಗುಂಪಿನಿಂದಲೂ ಪ್ರತಿರೋಧ ವ್ಯಕ್ತವಾಗಿದೆ. ಈ ಸಂದರ್ಭದಲ್ಲಿ ನಡೆದ ವಿದ್ವಂಸಕ ಕೃತ್ಯದಲ್ಲಿ ಮೂವತ್ತಕ್ಕೂ ಹೆಚ್ಚು ಅಂಗಡಿಗಳು ಬೆಂಕಿಗೆ ಆಹುತಿಯಾಗಿವೆ. ಹತ್ತಾರು ವಾಹನಗಳು ಸುಟ್ಟು ಕರಕಲಾಗಿವೆ. ಉದ್ರಿಕ್ತ ಗುಂಪು ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ. ಈ ವೇಳೆ ಡಿವೈಎಸ್ಪಿ, ಸಿಪಿಐ, ಪಿಎಸ್‍ಐ ಹಾಗೂ ಪೊಲೀಸ್ ಪೇದೆಗಳಿಗೆ ಗಾಯಗಳಾಗಿವೆ. ಪೊಲೀಸರು ಬೀಡುಬಿಟ್ಟಿದ್ದು ಪರಿ ಸ್ಥಿತಿ ನಿಯಂತ್ರಣದಲ್ಲಿದೆ. 81 ಜನರನ್ನು ಬಂಧಿಸಲಾಗಿದೆ. 
30ಕ್ಕೂ ಹೆಚ್ಚು ಮನೆ ಭಸ್ಮ: ಪಟ್ಟಣದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಜನತಾ ಪ್ಲಾಟ್ ಗಣೇಶನ ಮೂರ್ತಿಯನ್ನು ವಿಸರ್ಜನೆಗೆಂದು ಬುಧವಾರ ರಾತ್ರಿ ಮೆರವಣಿಗೆ ಮೂಲಕ ಒಯುತ್ತಿದ್ದಾಗ ಕಲ್ಲುಗಳು ತೂರಿ ಬಂದಿವೆ. ಪ್ರತಿಯಾಗಿ ಮೆರವಣಿಗೆಯಲ್ಲಿದ್ದವರೂ ಕಲ್ಲು ತೂರಿದ್ದಾರೆ. ಸುದ್ದಿ ಹರಡುತ್ತಿದ್ದಂತೆ ಸಂಗೊಳ್ಳಿ ರಾಯಣ್ಣ ರಸ್ತೆಯಲ್ಲಿ ಅಂಗಡಿ ಹಾಗೂ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ತಡೆಯಲು ಹೋದ ಪೊಲೀಸರ ಮೇಲೂ ಕಲ್ಲು ತೂರಲಾಗಿದೆ. 
ಘಟನೆಯಲ್ಲಿ 20ಕ್ಕೂ ಹೆಚ್ಚು ಬೈಕುಗಳು, 3 ಕ್ರೂಸರ್, 30ಕ್ಕೂ ಹೆಚ್ಚು ಅಂಗಡಿ, 4 ಮನೆಗಳು ಭಸ್ಮವಾಗಿವೆ. ಡಿಸಿ ಮೇಘಣ್ಣವರ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ನಿಯಂತ್ರಣಕ್ಕೆ ಯತ್ನಿಸಿದರು. ಬೆಳಗಾವಿ, ಬಾಗಲಕೋಟೆ, ಕೊಪ್ಪಳದಿಂದ ಹೆಚ್ಚುವರಿ ಪೊಲೀಸ್ ಕರೆಸಲಾಗಿದೆ. ಎರಡು ಅರೆಸೇನಾ ತುಕಡಿಗಳನ್ನೂ ಕರೆಸಿಕೊಳ್ಳಲಾಯಿತು. ಮತ್ತೊಂದಡೆ ಸಂಘಟಕರು ಗಣೇಶನ ಮೂರ್ತಿ ವಿಸರ್ಜನೆಗೆ ಅವಕಾಶ ಮಾಡಿಕೊಡಬೇಕು ಎಂದು ಪಟ್ಟುಹಿಡಿದು ಕುಳಿತರು. ಜಿಲ್ಲಾಧಿಕಾರಿ ಮೇಘಣ್ಣವರ ಸಂಘಟಕರ ಬಳಿ ಮೂರ್ನಾಲ್ಕು ಸುತ್ತು ಮಾತುಕತೆ ನಡೆಸಿ ಅನಂತರ ಅವರ ಮನವೊಲಿಸಿದರು. ಮುಂಜಾನೆ 4 ಗಂಟೆಗೆ ವಿಸರ್ಜನೆ ಮಾಡಲಾಯಿತು.
SCROLL FOR NEXT