ಜಿಲ್ಲಾ ಸುದ್ದಿ

ಸ್ಪೀಡ್ ಗವರ್ನರ್ ಅಳವಡಿಕೆಗೆ ನೋಟಿಸ್

ಬೆಂಗಳೂರು: ರಾಜ್ಯದಲ್ಲಿ ಸಾರಿಗೆ ವಾಹನಗಳಿಗೆ ಕಡ್ಡಾಯವಾಗಿ `ಸ್ಪೀಡ್ ಗವರ್ನರ್' ಅಳವಡಿಕೆ ಸಂಬಂಧ ರಾಜ್ಯ ಸಾರಿಗೆ ಇಲಾಖೆಯ ಅಧೀನ ಕಾರ್ಯದರ್ಶಿ, ಸಾರಿಗೆ ಮತ್ತು ರಸ್ತೆ ಸುರಕ್ಷಿತ ಇಲಾಖೆ ಆಯುಕ್ತರಿಗೆ ಹೈಕೋರ್ಟ್ ಬುಧವಾರ ನೋಟಿಸ್ ಜಾರಿ ಮಾಡಿದೆ.

ರಾಜ್ಯದ ಎಲ್ಲ ಸಾರಿಗೆ ವಾಹನಗಳಿಗೆ ಕಡ್ಡಾಯವಾಗಿ ಸ್ಪೀಡ್ ಗವರ್ನರ್ (ವೇಗ ನಿಯಂತ್ರಣ ಸಾಧನ) ಅಳವಡಿಸುವ ಕುರಿತು 2015ರ ಆ.11ರಂದು ಹೊರಡಿಸಿರುವ ಅಧಿ ಸೂಚನೆಯನ್ನು ಸಮರ್ಪಕವಾಗಿ ಜಾರಿ ಮಾಡಲು ರಾಜ್ಯ ಸಾರಿಗೆ ಇಲಾಖೆ ಕ್ರಮ ಕೈಗೊಳ್ಳುತ್ತಿ
ಲ್ಲ ಎಂದು ಆರೋಪಿಸಿ ಎಚ್‍ಎಎಲ್‍ನ ನಿವೃತ್ತ ನೌಕರ ವೈ.ಎನ್.ನಂಬಪ್ಪ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾ.ಎಸ್.ಕೆ.ಮುಖರ್ಜಿ ಮತ್ತು ನ್ಯಾ.ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ಪೀಠ ಆದೇಶಿಸಿದೆ.

ವಿಚಾರಣೆ ವೇಳೆ ಸರ್ಕಾರಿ ವಕೀಲೆ ನಿಲೋಫರ್ ಅಕ್ಬರ್, ಸ್ಪೀಡ್ ಗವರ್ನರ್ ನಿಯಮ ಜಾರಿಗೆ ಸರ್ಕಾರ ಈಗಾಗಲೇ ಕ್ರಮ ಕೈಗೊಂಡಿದೆ ಎಂದು ಕೋರ್ಟ್ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಏಳು ದಿನಗಳಲ್ಲಿ ಅರ್ಜಿ ಕುರಿತು ಆಕ್ಷೇಪಣೆ ಅಥವಾ ಸ್ಪೀಡ್ ಗವರ್ನರ್ ನಿಯಮ ಜಾರಿಗೆ ಕೈಗೊಂಡ ಕ್ರಮಗಳ ಕುರಿತು ವರದಿ ಸಲ್ಲಿಸಬೇಕು ಎಂದು ಸರ್ಕಾರಕ್ಕೆ ಸೂಚಿಸಿ ವಿಚಾರಣೆಯನ್ನು 10 ದಿನಗಳ ಕಾಲ ಮುಂದೂಡಿತು.

SCROLL FOR NEXT