ಜಿಲ್ಲಾ ಸುದ್ದಿ

ಅನ್ನದಾನಯ್ಯ ಪುರಾಣಿಕ್ ಸ್ಥಿತಿ ಚಿಂತಾಜನಕ: ಸರ್ಕಾರ, ಕಸಾಪದಿಂದ ಕಡೆಗಣನೆ

Srinivas Rao BV

ಬೆಂಗಳೂರು: ಹಿರಿಯ ಸಾಹಿತಿ ಅನ್ನದಾನಯ್ಯ ಪುರಾಣಿಕ್(87 ) ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ಬನಶಂಕರಿಯ ಸಾಗರ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಳೆದ 10 ದಿನಗಳಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಸರ್ಕಾರದ ಪ್ರತಿನಿಧಿಗಳು ಮತ್ತು ಸಾಹಿತ್ಯ ಪರಿಷತ್ ನ ಅಧ್ಯಕ್ಷರು ಭೇಟಿ ಮಾಡಿಲ್ಲ ಎಂಬ ಆರೋಪ ಕೇಳಿಬಂದಿದೆ. ಪುರಾಣಿಕ್ ಅವರು ಗಾಂಧಿಜಿ ಆರಂಭಿಸಿದ ಕ್ವಿಟ್ ಇಂಡಿಯಾ ಚಳವಳಿಯಿಂದ ಹಿಡಿದು ಕರ್ನಾಟಕ ಏಕೀಕರಣ, ಹೈದರಾಬಾದ್ ಕರ್ನಾಟಕ ವಿಮೋಚನೆ ಚಳುವಳಿವರೆಗೂ ಹೋರಾಟದ ನೇತೃತ್ವ ವಹಿಸಿಕೊಂಡಿದ್ದರು.
1957 ರಲ್ಲಿ ಅಖಿಲ ಕರ್ನಾಟಕ ಪರಿಷತ್ ಸ್ಥಾಪಿಸಿದ್ದರು. ಇದರೊಂದಿಗೆ ಕನ್ನಡ ಸಾಹಿತ್ಯ ಪರಿಷತ್ ನ ಕಾರ್ಯದರ್ಶಿ ಸ್ಥಾನ ವಹಿಸಿಕೊಂಡು ಸರ್ಕಾರದಿಂದ ಬರುತ್ತಿದ್ದ ಅನುದಾನವನ್ನು 1 ಲಕ್ಷ ರೂಪಾಯಿಗೆ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಪರಿಷತ್ ಮುದ್ರಣಾಲಯ ಸ್ಥಾಪನೆ, ಗಡಿನಾಡು ಸಾಹಿತ್ಯ ಸಮ್ಮೇಳನದ ಮೂಲಕ ಪುರಾಣಿಕ್ ಮನೆಮಾತಾಗಿದ್ದರು. 30 ಕ್ಕೂ ಹೆಚ್ಚು ಪುಸ್ತಕ ಬರೆದು ಸಾಹಿತ್ಯ ಲೋಕಕ್ಕೆ ಅಮೂಲ್ಯ ಕೊಡುಗೆ ನೀಡಿರುವ ಪುರಾಣಿಕ್ ಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಲಭಿಸಿದೆ.

SCROLL FOR NEXT