ಬೆಂಗಳೂರು: ಲೋಕಾಯುಕ್ತರ ನೇಮಕಕ್ಕೆ ಸಂಬಂಧಿಸಿದಂತೆ ಮಹತ್ವದ ಸಭೆ ಸೋಮವಾರ ಸಂಜೆ 5 ಗಂಟೆಗೆ ಕುಮಾರ ಕೃಪಾ ಅತಿಥಿ ಗೃಹದಲ್ಲಿ ನಡೆಯಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ, ಎಸ್.ಕೆ ಮುಖರ್ಜಿ, ವಿಧಾನ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ, ಮೇಲ್ಮನೆ ಸಭಾಪತಿ ಡಿ. ಎಚ್.ಶಂಕರಮೂರ್ತಿ, ವಿಪಕ್ಷ ನಾಯಕರಾದ ಕೆ.ಎಸ್.ಈಶ್ವರಪ್ಪ, ಸಚಿವ ಟಿ.ಬಿ.ಜಯಚಂದ್ರ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಲೋಕಾಯುಕ್ತ ಹುದ್ದೆಗೆ ನೇಮಿಸಬಹುದಾದ ಮೂವರು ಅರ್ಹರ ಪಟ್ಟಿಯನ್ನು ರಾಜ್ಯ ಸರ್ಕಾರ ಸಿದ್ಧಪಡಿಸಿದೆ. ಅದರಲ್ಲಿ ನಿವೃತ್ತ ನ್ಯಾಯಮೂರ್ತಿಗಳಾದ ಸಿರಿಯಾಕ್ ಜೋಸೆಫ್. ಎಸ್.ಆರ್. ನಾಯಕ್ ಹಾಗೂ ವಿಕ್ರಂಜೀತ್ ಸೇನ್ ಅವರಿದ್ದಾರೆ. ಈ ಮಧ್ಯೆ ಹೈಕೋರ್ಟ್‍ನ ಮುಖ್ಯನ್ಯಾಯಮೂರ್ತಿಗಳು ಸಹ ಅರ್ಹರ ಪಟ್ಟಿಯನ್ನು ಪ್ರತ್ಯೇಕವಾಗಿ ಪಟ್ಟಿಯೊಂದನ್ನು ಸಿದ್ಧಪಡಿಸಲಿದ್ದಾರೆ. ಬಗ್ಗೆ ಸಭೆಯಲ್ಲಿ ಚರ್ಚಿಸಿ ಅಂತಿಮವಾಗಿ ತೀರ್ಮಾನ ಕೈಗೊಳ್ಳಲಿದ್ದಾರೆ.
ಇತ್ತೀಚೆಗೆ ನ್ಯಾ.ಆನಂದ್ ಅವರನ್ನು ಉಪ ಲೋಕಾಯುಕ್ತರನ್ನಾಗಿ ನೇಮಿಸಿರುವ ರಾಜ್ಯ ಸರ್ಕಾರ, ಈಗ ನ್ಯಾ. ಭಾಸ್ಕರ್ ರಾವ್ ರಾಜೀನಾಮೆಯಿಂದ ತೆರವಾಗಿರುವ ಲೋಕಾಯಿಕ್ತ ಹುದ್ದೆಗೆ ಹೊಸಬರನ್ನು ನೇಮಿಸಬೇಕಿದೆ.