ಬೆಂಗಳೂರು: ಬೆಂಗಳೂರು ಜಲಮಂಡಳಿಯು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎನ್ನುವುದಕ್ಕೆ ಇದೊಂದು ತಾಜಾ ಉದಾಹರಣೆ! ವಾರ್ಡ್ ನಂ.5ರ ಸಂಪಿಗೆಹಳ್ಳಿ, ಶ್ರೀವೆಂಕಟೇಶ್ವರ ನಗರ, ಶಿವರಾಮಕಾರಂತನಗರ (ಟೆಲಿಕಾಂ ಲೇಔಟ್), ವಿನ್‍ಫೀಲ್ಡ್ ಗಾರ್ಡನ್, ಸೂರ್ಯೋದಯ ನಗರ, ಬಾಲಾಜಿ ಲೇಔಟ್ ಮೊದಲಾದ ಬಡಾವಣೆಗಳ ನಿವಾಸಿಗಳಿಗೆ ಕಾವೇರಿ ನೀರು ಇನ್ನೂ ಮರೀಚಿಕೆಯಾಗಿದೆ.
2004ರಿಂದಲೇ ಈ ಬಡಾವಣೆಗಳಲ್ಲಿ ಮನೆಗಳ ನಿರ್ಮಾಣ ಆರಂಭವಾಗಿದೆ. ನಾಲ್ಕೈದು ಸಾವಿರ ಮನೆಗಳು ಇಲ್ಲಿವೆ. ಮನೆ ನಿರ್ಮಾಣಕ್ಕೆ ಅನುಮತಿ ನೀಡುವಾಗಲೇ ರು.10 ಸಾವಿರ ಪೆÇ್ರೀರೇಟಾ ಶುಲ್ಕ ತುಂಬಿಸಿಕೊಂಡಿದ್ದಾರೆ. ಆದರೆ ಇದುವರೆಗೂ ಕಾವೇರಿ ಇಲ್ಲಿನವರಿಗೆ ಕನಸಿನ ಕನ್ಯೆಯಾಗಿದ್ದಾಳೆ. ಒಂದು ವರ್ಷದ ಹಿಂದೆ ಈ ಬಡಾವಣೆಗಳಲ್ಲಿ ಕಾವೇರಿ ನೀರು ಬರುವ ಪೈಪ್‍ಲೈನ್ ಅಳವಡಿಸಲಾಗಿದೆ. ಇನ್ನೇನು ನೀರು ಬಂತು ಎಂಬ ಉತ್ಸಾಹದಲ್ಲಿ ಎಲ್ಲ ಮನೆಯ ವರೂ ಖಾಸಗಿ ಗುತ್ತಿಗೆದಾರರೊಬ್ಬರಿಗೆ ಮೂರರಿಂದ ಮೂರೂವರೆ ಸಾವಿರದವರೆಗೆ ಹಣ ನೀಡಿ ತಮ್ಮ ಟ್ಯಾಂಕ್‍ವರೆಗೆ ಪೈಪ್ ಎಳೆಸಿಕೊಂಡಿದ್ದಾರೆ. ಇಷ್ಟೆಲ್ಲ ಆಗಿ ಒಂದು ವರ್ಷ ಮುಗಿಯುತ್ತ ಬಂದರೂ ಜಲಮಂಡಳಿಯವರು ಇತ್ತ ಕಡೆ ತಲೆಯನ್ನೇ ಹಾಕಿಲ್ಲ.
ಕೆಲವರು 10 ಸಾವಿರ ರುಪಾಯಿ ತುಂಬಿ 12 ವರ್ಷಗಳೇ ಕಳೆದು ಹೋಗಿವೆ. ನಮ್ಮ ಹಣಕ್ಕೆ ಬಡ್ಡಿ ಇಲ್ಲವೆ ಎಂದು ಈ ಬಡಾವಣೆಗಳ ನಿವಾಸಿಗಳಲ್ಲಿ ಒಬ್ಬರಾದ ಹರೀಶ್ ಪಾಟೀಲ ಪ್ರಶ್ನಿಸುತ್ತಾರೆ. ಸಾಮಾನ್ಯ ಬಡ್ಡಿಯ ಲೆಕ್ಕ ಹಾಕಿದರೂ ಇದು ಸುಮಾರು 30 ಸಾವಿರ ದಾಟುತ್ತದೆ. ಹೀಗಿರುವಾಗ ಜಲಮಂಡಳಿಯವರು ತಾವೇ ಮೀಟರುಗಳನ್ನು ತಂದು ಜೋಡಿಸಿ ನೀರು ಪೂರೈಕೆ ಆರಂಭಿಸಬೇಕು ಎಂದು ಷಣ್ಮುಖ ಸ್ವಾಮಿ ವಾದಿಸುತ್ತಾರೆ.
ಇದನ್ನೆಲ್ಲ ಕಿವಿ ಇದ್ದೂ ಕಿವುಡಾಗಿರುವ, ಕಣ್ಣಿದ್ದೂ ಕುರುಡಾಗಿರುವ ಜಲಮಂಡಳಿಯ ಗಮನಕ್ಕೆ ಎಲ್ಲಿ ಬರಬೇಕು? ಈ ಭಾಗದಲ್ಲಿ ಕಾರ್ಪೊರೇಟರ್ ಇಲ್ಲವೆ? ಇದ್ದಾರೆ. ಇನ್ನೂ ಹೆಚ್ಚಿನದೆಂದರೆ ಕೃಷಿ ಸಚಿವ ಕೃಷ್ಣ ಭೈರೇಗೌಡರ ಕ್ಷೇತ್ರ ಇದು. ತಮ್ಮ ಕ್ಷೇತ್ರದ ನಾಗರಿಕರ ಈ ಸಮಸ್ಯೆ ಇವರ ಕಿವಿಗೆ ಬಿದ್ದಿಲ್ಲವೆ? ಈಗಲಾದರೂ ಈ ಮಹನೀಯರು ನಮ್ಮ ನೆರವಿಗೆ ಬರಲಿ, ಜಲಮಂಡಳಿಯ ಕಿವಿ ಹಿಂಡಿ ಕಾವೇರಿ ನೀರಿನ ಸಂಪರ್ಕ ಕಲ್ಪಿಸಲಿ ಎನ್ನುತ್ತಿದ್ದಾರೆ ಇಲ್ಲಿಯ ನಿವಾಸಿಗಳು. ಈಗಾಗಲೇ ನಾವು ಕಟ್ಟಿರುವ ಹಣದ ಬಡ್ಡಿಯಿಂದಲೇ ನಮಗೆ ನೀರಿನ ಸಂಪರ್ಕ ಕಲ್ಪಿಸಬೇಕು.
ಇನ್ನೂ ಉಳಿದ ಹಣವನ್ನು ನೀರಿನ ಬಿಲ್‍ನಲ್ಲಿ ಹೊಂದಾಣಿಕೆ ಮಾಡಿಕೊಡ ಬೇಕು. ಇಲ್ಲದಿದ್ದರೆ ಇದನ್ನು ಗ್ರಾಹಕ ನ್ಯಾಯಾಲಯದಲ್ಲಿ ಪ್ರಶ್ನಿಸಬೇಕಾಗುತ್ತದೆ ಎಂದು ಇಲ್ಲಿಯ ನಿವಾಸಿಗಳು ಎಚ್ಚರಿಸಿದ್ದಾರೆ. ನಗರದಲ್ಲಿ ಅನಧಿಕೃತ ನೀರಿನ ಸಂಪರ್ಕ, ನೀರಿನ ಸೋರಿಕೆ ಮತ್ತು ಕಳ್ಳತನದಿಂದಲೇ ಶೇ. 40 ರಷ್ಟು ನೀರು ವ್ಯಯವಾಗುತ್ತಿದೆ. ಈ ನೀರಿನ ಅಪವ್ಯಯ ತಪ್ಪಿಸಿ ಗ್ರಾಮಾಂತರ ಪ್ರದೇಶದ 110 ಹಳ್ಳಿಗಳಿಗೆ ಹಂಚಿಕೆ ಮಾಡಲು ಹೊರಟಿರುವ ಜಲ ಮಂಡಳಿಗೆ ಬಗಲಲ್ಲೆ ಇರುವ ನಿತ್ಯ ಸಮಸ್ಯೆಯನ್ನು ಪರಿಹರಿಸಲು ಸಮಯ ಇಲ್ಲದಂತಾಗಿದೆ.