ಬೆಂಗಳೂರು: ಎರಡು ದ್ವಿಚಕ್ರ ವಾಹನಗಳ ಮುಖಾಮುಖಿ ಡಿಕ್ಕಿಯಲ್ಲಿ ರಸ್ತೆಗೆ ಬಿದ್ದ ಸವಾರನೊಬ್ಬನ ಮೇಲೆ ಬಿಎಂಟಿಸಿ ಬಸ್ ಚಕ್ರಕ್ಕೆ ಸಿಕ್ಕಿ ಗಾಯಗೊಂಡು ಮೃತಪಟ್ಟಿರುವ ಘಟನೆ ಹಳೇ ಏರ್‍ಪೋರ್ಟ್ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ.
ಮಾರತ್ ಹಳ್ಳಿ ನಿವಾಸಿ ಶಿಬುಲಾಲ್(18) ಮೃತಪಟ್ಟವರು. ಎಚ್‍ಎಎಲ್ ಮಾರ್ಕೆಟ್ ಕಡೆಯಿಂದ ತಮ್ಮ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದಾಗ ಬೆಳಗ್ಗೆ 6.30ರ ಸುಮಾರಿಗೆ ಎಚ್ ಎಎಲ್ ಮ್ಯೂಸಿಯಂ ಎದುರು ಈ ಘಟನೆ ನಡೆದಿದೆ. ಪಾನಿಪೂರಿ ವ್ಯಾಪಾರಿಯಾಗಿರುವ ಶಿಬು ಲಾಲ್ ಏಕಮಖ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಬರುವಾಗ ಎದುರಿನಿಂದ ದ್ವಿಚಕ್ರ ವಾಹನವೊಂದು ವೇಗವಾಗಿ ಬಂದ ಪರಿಣಾಮ ಎರಡು ದ್ವಿಚಕ್ರ ವಾಹನಗಳು ಮುಖಾಮುಖಿ ಡಿಕ್ಕಿಯಾಗಿವೆ. ಈ ವೇಳೆ ಎಡ ಬದಿಗೆ ಬಿದ್ದ ಶಿಬುಲಾಲ್ ಮೇಲೆ ಅದೇ ಮಾರ್ಗದಲ್ಲಿ ಬರುತ್ತಿದ್ದ ಬಿಎಂಟಿಸಿ ಬಸ್‍ನ ಚಕ್ರ ಉರುಳಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಆತನನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ ಕರೆದೊಯ್ದರು. ಅಷ್ಟರಲ್ಲಾಗಲೇ ಶಿಬುಲಾಲ್ ಮೃತಪಟ್ಟಿದ್ದರು.
ಮತ್ತೊಂದು ದ್ವಿಚಕ್ರ ವಾಹನ ಸವಾರರು ಬಲಬದಿಯ ರಸ್ತೆ ತಡೆಗೋಡೆಗೆ ಗುದ್ದಿದರೂ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದರು.