ಬೆಂಗಳೂರು: ರಾಜರಾಜೇಶ್ವರಿ ನಗರ ಕ್ಷೇತ್ರದ ಕಾಂಗ್ರೆಸ್ ಶಾಸಕರ ವಿರುದ್ಧ ಅದೇ ಪಕ್ಷದ ಪಾಲಿಕೆ ಸದಸ್ಯೆ ಗಂಭೀರ ಆರೋಪ ಮಾಡಿದ ಬೆನ್ನಲ್ಲೇ, ಇದೀಗ ಪಾಲಿಕೆಯ 17ನೇ ವಾರ್ಡ್‍ನ ಬಿಜೆಪಿ ಸದಸ್ಯೆ ಮಮತಾ ವಾಸುದೇವ್ ಸರದಿ. ತಮ್ಮ ಕ್ಷೇತ್ರದ ಶಾಸಕರ ಕುಮ್ಮಕ್ಕಿನಿಂದಲೇ ಅವರ ಪಕ್ಷದ ಪಾಲಿಕೆ ಸದಸ್ಯರು ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ಪೊಲೀಸರಿಗೆ ದೂರು ಕೊಟ್ಟಿರುವುದಾಗಿಯೂ ಅವರು ಹೇಳಿದ್ದಾರೆ.
ಈ ಮಧ್ಯೆಯೇ ಸುದ್ದಿಗೋಷ್ಠಿಯ ನಡೆಸಿದ ಬಿಜೆಪಿ ನಾಯಕರು, ರಾಜರಾಜೇಶ್ವರಿ ನಗರ ಕ್ಷೇತ್ರದ ಕಾಂಗ್ರೆಸ್ ಶಾಸಕರ ಕ್ರಮ ಖಂಡಿಸಿ, ಹೋರಾಟಕ್ಕೆ ಅಣಿಯಾಗಿದ್ದಾರೆ. ಅದರಂತೆ ಜನವರಿ 9ರಂದು ಬಿಬಿಎಂಪಿ ಎದುರು ಹೋರಾಟ ಹಮ್ಮಿಕೊಂಡಿರುವುದಾಗಿ ಮಹಿಳಾ ಮೋರ್ಚಾದ ಗೀತಾ ವಿವೇಕಾನಂದ ಹೇಳಿದ್ದಾರೆ.
ವಿಧಾನ ಪರಿಷತ್ ಸದಸ್ಯ ಅಶ್ವತ್ಥನಾರಾಯಣ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲೆ ದೌರ್ಜನ್ಯ ಹೆಚ್ಚಾಗುತ್ತಲೇ ಇದೆ. ಇದೀಗ ಆ ಪಕ್ಷದ ಜನಪ್ರತಿನಿಧಿಗಳು ದಬ್ಬಾಳಿಕೆ ಮಾಡಲು ಆರಂಭಿಸಿದ್ದಾರೆ. ಇದಕ್ಕೆ ಉದಾಹರಣೆ ಎಂಬಂತೆ ಅದೇ ಪಕ್ಷದ ಪಾಲಿಕೆ ಸದಸ್ಯೆ
ಪಾಲಿಕೆಯ ಕೌನ್ಸಿಲ್ ಸಭೆಯಲ್ಲಿಯೇ ರಾಜಿನಾಮೆ ಕೊಟ್ಟರು. ಇದೀಗ ಇಂತಹದ್ದೇ ಮತ್ತೊಂದು ಪ್ರಕರಣ ನಡೆದಿದೆ ಎಂದರು.
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕರ ಮೇಲೆ ಅದೇ ಕ್ಷೇತ್ರದ ಪಾಲಿಕೆ ಸದಸ್ಯೆ ಆಶಾ ಅವರು ಗಂಭೀರ ಆರೋಪ ಮಾಡಿದ್ದರು.ಇದೀಗ ನಮ್ಮ ಪಕ್ಷದ ಪಾಲಿಕೆ ಸದಸ್ಯೆ ಮೇಲೆಯೂ ಮಾನಸಿಕ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಇಚ್ಚೀಚೆಗೆ ಖಾಸಗಿ ಸುದ್ದಿ ವಾಹಿನಿಯೊಂದರ ಕಾರ್ಯಕ್ರಮದಲ್ಲಿ 17ನೇ ವಾರ್ಡ್ ನ ಪಾಲಿಕೆ ಸದಸ್ಯೆ ಮಮತಾ ಅವರು ತಮ್ಮ ಕ್ಷೇತ್ರದ ಸಮಸ್ಯೆ ಹೇಳಿಕೊಂಡಿದ್ದರು. ಕುಡಿವ ನೀರಿನ ಸಮಸ್ಯೆ ಹದಗೆಟ್ಟ ರಸ್ತೆ ಬಗ್ಗೆ ಹಾಗೂ ಜೆಪಿ ಪಾರ್ಕ್ ತಡೆಗೋಡೆ ನಿರ್ಮಿಸುವ ಬಗ್ಗೆ ಪ್ರಸ್ತಾವ ಮಾಡಿದ್ದರು. ಇದೇ ವೇಳೆ ಕಾರ್ಯಕ್ರಮದಲ್ಲಿ ಪಾಲ್ಗೋಂಡಿದ್ದ ಕಾಂಗ್ರೆಸ್ ಕಾರ್ಪೋರೇಟರ್ ಶಾಸಕರ ವಿರುದ್ಧ ದೂರು ನೀಡಿದರೂ ಗೃಹ ಮಂತ್ರಿಯಾಗಿರುವ ಆ ಪಕ್ಷದ ರಾಜ್ಯಾಧ್ಯಕ್ಷರೂ ಕ್ರಮ ಕೈಗೊಳ್ಳದೇ ಮೂಕ ಪ್ರೇಕ್ಷಕರಾಗಿದ್ದಾರೆ ಎಂದು ಟೀಕಿಸಿದರು. ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ನಿಯಂತ್ರಿಸಲು ಶಿಫಾರಸು ಮಾಡುವ ತಜ್ಞರ ಸಮಿತಿ ಅಧ್ಯಕ್ಷ ವಿ.ಎಸ್ ಉಗ್ರಪ್ಪ ಈ ಪ್ರಕರಣದಲ್ಲಿ ಸ್ವಯಂ ಪ್ರಕರಣ ದಾಖಲಿಸಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ. ಹಾಗೆಯೇ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸಾ ಸಹ ಸ್ವಯಂ ಪ್ರೇರಿತ ದೂರು ದಾಖಲಿಸಿ ಕ್ರಮಕ್ಕೆ ಮುಂದಾಗುತ್ತಾರೆಂಬ ನಂಬಿಕೆ ಇದೆ ಎಂದು ಹೇಳಿದ ಅವರು ಮುಖ್ಯಮಂತ್ರಿ ಸಿದ್ದ ರಾಮಯ್ಯ ನವರು ಈ ಕೂಡಲೇ ರಾಜರಾಜೇಶ್ವರಿ ನಗರ ಕ್ಷೇತ್ರದ ಕಾಂಗ್ರೆಸ್ ಶಾಸಕರ ದಬ್ಬಾಳಿಕೆ ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಆಶಾ ರಾಜಿನಾಮೆ ತಿರಸ್ಕಾರ: ಮೇಯರ್
ಬೆಂಗಳೂರು: ಎಚ್‍ಎಂಟಿ ವಾರ್ಡ್ ಸದಸ್ಯೆ ಆಶಾ ಸುರೇಶ್ ಅವರು ರಾಜಿನಾಮೆ ಪತ್ರವನ್ನು ತಿರಸ್ಕರಿಸಲಾಗಿದೆ ಎಂದು ಮೇಯರ್ ಮಂಜುನಾಥರೆಡ್ಡಿ ತಿಳಿಸಿದ್ದಾರೆ. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೌನ್ಸಿಲ್ ಸಭೆಯಲ್ಲಿ ಪಾಲಿಕೆಯ ಸದಸ್ಯೆ ಆಶಾ ಸುರೇಶ್ ನೀಡಿದ ಲಕೋಟೆಯಲ್ಲಿನ ಪತ್ರದಲ್ಲಿ ಎಲ್ಲಿಯೂ ರಾಜಿನಾಮೆ ಎಂಬ ಪದವನ್ನು ಬಳಸಿಲ್ಲ. ನನ್ನ ವಾರ್ಡ್‍ನಲ್ಲಿ ಶಾಸಕರು ಹಸ್ತಕ್ಷೇಪ ಮಾಡುತ್ತಿರುವುದರಿಂದ ತೊಂದರೆಗಳು ಆಗುತ್ತಿದ್ದು, ಪಾಲಿಕೆಯ ಸದಸ್ಯೆಯಾಗಿ ಕೆಲಸ ಮಾಡಲು ಮುಜುಗರವಾಗುತ್ತಿದೆ. ನನಗೆ ನ್ಯಾಯ ಒದಗಿಸದಿದ್ದಲ್ಲಿ ನನ್ನ ಸದಸ್ಯತ್ವ ವನ್ನು ತ್ಯಜಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಆಶಾ ಸುರೇಶ್ ನೀಡಿರುವ ಪತ್ರ ಕ್ರಮಬದ್ಧವಾಗಿಲ್ಲ ಹಾಗೂ ಪತ್ರದಲ್ಲಿ ರಾಜಿನಾಮೆ ಕುರಿತು ಪ್ರಸ್ತಾಪಿಸಿಲ್ಲ. ಹೀಗಾಗಿ ಪತ್ರವನ್ನು ತಿರಸ್ಕರಿಸಲಾಗಿದೆ ಎಂದು ಸ್ಪಷ್ಟನೆ ನೀಡಿದರು.