ಜಿಲ್ಲಾ ಸುದ್ದಿ

ಕ್ಲಬ್‍ಗೆ ಏಕರೂಪ ಕಾನೂನು

Sumana Upadhyaya

ಬೆಂಗಳೂರು: ಮನರಂಜನಾ ಕ್ಲಬ್ ಗಳು ಭಾರತೀಯ ವಸ್ತ್ರಧಾರಿಗಳಿಗೆ ಪ್ರವೇಶ ನೀಡುವ ಜತೆಗೆ ಏಕರೂಪ ಕಾನೂನು ಅಳವಡಿಸಿಕೊಳ್ಳುವಂತೆ ರಚಿಸಿರುವ  ವರದಿಯನ್ನು ಶೀಘ್ರದಲ್ಲೇ  ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಸದನ ಸಮಿತಿ ಅಧ್ಯಕ್ಷ ಎನ್.ಎ.ಹ್ಯಾರಿಸ್   ತಿಳಿಸಿದರು.

ನವದೆಹಲಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ಅವರು, ಬೆಂಗಳೂರಿನ  ಕೆಲವು ಕ್ಲಬ್‍ಗಳು ಸರ್ಕಾರದಿಂದ ಭೂಮಿ, ಕಟ್ಟಡ, ಮೂಲ ಸೌಕರ್ಯಗಳನ್ನು ಪಡೆದು  ಭಾರತೀಯ ಸಂಸ್ಕೃತಿಗೆ ವಿರುದ್ಧವಾದ ವಸ್ತ್ರ ನೀತಿ ಅಳವಡಿಸಿಕೊಂಡಿವೆ. ಭಾರತೀಯ ವಸ್ತ್ರಧಾರಿಗಳಿಗೆ ಪ್ರವೇಶಾವಕಾಶ ನೀಡುತ್ತಿಲ್ಲ. ಈ ರೀತಿಯ ವರ್ತನೆ ಕಾನೂನು ಬಾಹಿರವಾಗುತ್ತದೆ. ಎಲ್ಲ ಜನಸಾಮಾನ್ಯರಿಗೂ ಕ್ಲಬ್ ಗಳಲ್ಲಿ ಸದಸ್ಯತ್ವ ನೀಡಲು ಪೂರಕವಾದ ಅಧ್ಯಯನ ನಡೆಸಿ ವರದಿ ಸಲ್ಲಿಸಲಾಗುವುದು ಎಂದು ಹೇಳಿದರು. 

ಲೋಕಸಭೆ ಮಹಾಪ್ರಧಾನ ಕಾರ್ಯದರ್ಶಿ ಅನೂಪ್ ಮಿಶ್ರಾ, ಕೇಂದ್ರ ವಸತಿ ಸಮಿತಿ  ಅಧ್ಯಕ್ಷ  ಮೇಘವಾಲ್, ಸಾಂವಿಧಾನಿಕ ಕ್ಲಬ್ ಅಧ್ಯಕ್ಷರು ಹಾಗೂ ಕೇಂದ್ರ ಸಚಿವರಾದ ರಾಜೀವ್ ಪ್ರತಾಪ್ ರೂಢಿ, ಸದಾನಂದಗೌಡ,  ಅನಂತಕುಮಾರ್, ಸಿದ್ದೇಶ್ವರ, ಜಿತೇಂದ್ರ ಸಿಂಗ್  ಅವರನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚಿಸಲಾಗಿದೆ. ಚೆನ್ನೈಗೆ ಭೇಟಿ ನೀಡಿ ಅಲ್ಲಿನ ಕ್ಲಬ್ ಗಳನ್ನು  ಪರಿಶೀಲಿಸಿ ಅಧ್ಯಯನ ನಡೆಸಲಾಗಿದೆ. ನವದೆಹಲಿಯ ಸಾಂವಿಧಾನಿಕ ಕ್ಲಬ್, ಇಂಡಿಯಾ   ಹ್ಯಾಬಿಟೇಟ್ ಸೆಂಟರ್, ಇಂಡಿಯಾ ಇಂಟರ್ ನ್ಯಾಷನಲ್  ಸೆಂಟರ್, ಡೆಲ್ಲಿ ಜಿಮ್ ನ ಕ್ಲಬ್ ಗಳಿಗೆ ಭೇಟಿ ನೀಡಿ ಅಲ್ಲಿನ ನಿರ್ವಹಣೆ, ಕಾರ್ಯದರ್ಶಿಗಳ  ನೇಮಕ ಸೇರಿದಂತೆ  ರೂಪುರೇಷೆಗಳನ್ನು ಪರಿಶೀಲಿಸಲಾಗಿದೆ ಎಂದರು.

ರಾಜ್ಯದ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ  ಕೆಲವು ಕ್ಲಬ್ ಗಳು ನೋಂದಣಿ ಮಾಡದ  ವಿಚಾರ ತಿಳಿದುಬಂದಿದೆ. ಅಧ್ಯಯನ ವರದಿ ನಂತರ ಕ್ರಮ ಜರುಗಿಸಲಾಗುವುದು ಎಂದರು.   

SCROLL FOR NEXT