ಬೆಂಗಳೂರು: ಭಾರತೀಯ ಔಷಧ ಮತ್ತು ವೈದ್ಯಕೀಯ ವಲಯದ ಬೆಳವಣಿಯ ದೃಷ್ಟಿಯಿಂದ ಕರ್ನಾಟಕ ಸೇರಿದಂತೆ ದೇಶ ಆರು ಭಾಗಗಳಲ್ಲಿ ಫಾರ್ಮ್ ಪಾರ್ಕ್‍ಗಳು ಮತ್ತು 12 ರಾಷ್ಟ್ರೀಯ ಔಷಧೀಯ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ತಿಳಿಸಿದ್ದಾರೆ.
ಗುರುವಾರ ಬೆಂಗಳೂರಿನ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ `ಇಂಡಿಯಾ ಮೆಡಿಕಲ್ ಫಾರ್ಮ್ ಮತ್ತು ಇಂಡಿಯಾ ಮೆಡಿಕಲ್ ಎಕ್ಸ್ ಪೊ-2016 ಉದ್ಘಾಟಿಸಿ ಮಾತನಾಡಿದ ಅವರು, ಅತಿ ಹೆಚ್ಚು ಔಷಧಿಗಳ ಉತ್ಪಾದನೆಯಲ್ಲಿ ಭಾರತ ವಿಶ್ವದ 3 ನೇ ರಾಷ್ಟ್ರವಾಗಿದೆ. 2020 ವೇಳೆಗೆ ಭಾರತ ಔಷಧೀಯ ಕ್ಷೇತ್ರವನ್ನು ಮುನ್ನಡೆಸಲಿದೆ. ಕರ್ನಾಟಕ ಸರ್ಕಾರ ಈಗಾಗಲೇ ಪಾರ್ಕ್ ನಿಮರ್ಮಾಣಕ್ಕೆ ಜಮೀನು ಹಾಗೂ ಮೂಲಸೌಕರ್ಯಗಳನ್ನು ಒದಗಿಸಿಕೊಡುವ ಭರವಸೆ ನೀಡಿದೆ. ಮುಂದಿನ ತಿಂಗಳು ನಡೆಯುವ `ಇನ್ವೆಸ್ಟ್ ಕರ್ನಾಟಕ 2016' ಜಾಗತಿಕ ಸಮಾವೇಶದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅಧಿಕಾರಿಗಳು ಒಡಂಬಡಿಕೆಗೆ ಸಹಿ ಹಾಕಲಿದ್ದಾರೆ.
ಉಳಿದಂತೆ ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ, ತೆಲಂಗಾಣ ಮತ್ತು ಆಂಧ್ರಪ್ರದೇಶಗಳಲ್ಲಿ ಪಾಕ್ರ್ ಗಳು ಸ್ಥಾಪನೆಯಾಗಲಿವೆ ಎಂದರು. ಜಗತ್ತಿನಲ್ಲಿ ಜನರು ಸೇವಿಸುವ 5 ಮಾತ್ರೆಗಳ ಪೈಕಿ 1 ಮಾತ್ರೆ ಭಾರತದ್ದಾಗಿದ್ದು, ಔಷಧಗಳ ಉತ್ಪಾದನಾ ವೆಚ್ಚವನ್ನು ಶೇ.30ರಷ್ಟು ಕಡಿಮೆ ಮಾಡಿದರೆ ಭಾರತ ಚೀನಾ ದೇಶಕ್ಕೆ ಇನ್ನಷ್ಟು ಪೈಪೋಟಿ ನೀಡಬಹುದಾಗಿದೆ. ಸಂಶೋಧನೆ ಮತ್ತು ಅಭಿವೃದ್ಧಿ ಕೈಗಾರಿಕೆಗಳ ಬೆನ್ನೆಲುಬಾಗಿದ್ದು ಕೇಂದ್ರ ನೀಡುತ್ತಿರುವ ಅನುದಾನವನ್ನು ಮುಂದುವರಿಸುವ ಕುರಿತು ಮಾತುಕತೆ ನಡೆಸಲು ಕೇಂದ್ರ ಹಣಕಾಸು ಸಚಿವರ ಬಳಿಗೆ ಉದ್ಯಮಿಗಳ ನಿಯೋಗ ಕರೆದುಕೊಂಡು ಹೋಗಲಾಗುವುದು ಎಂದು ಹೇಳಿದರು.