ಬೆಂಗಳೂರು: ಲೋಕಾಯುಕ್ತ ಹುದ್ದೆ ನೇಮಕ ವಿಚಾರದಲ್ಲಿ ಒಮ್ಮತದ ಅಭಿಪ್ರಾಯ ಮೂಡದ ಹಿನ್ನೆಲೆಯಲ್ಲಿ ತಮ್ಮ ಸಮ್ಮತಿಯನ್ನು ಹಿಂಪಡೆಯುತ್ತಿರುವುದಾಗಿ ನಿವೃತ್ತ ನ್ಯಾ. ವಿಕ್ರಂಜಿತ್ ಸೆನ್ ಸರ್ಕಾರಕ್ಕೆ ತಿಳಿಸಿದ್ದಾರೆ. ಇದರೊಂದಿಗೆ ನಿವೃತ್ತ ನ್ಯಾ. ಎಸ್.ಆರ್.ನಾಯಕ್ ಅವರಿಗೆ ಆ ಹುದ್ದೆ ಸಿಗುವುದು ಬಹುತೇಕ ಖಚಿತವಾದಂತಾಗಿದೆ.
ನ್ಯಾ.ಎಸ್.ಆರ್ ನಾಯಕ್ ಅವರ ಹೆಸರನ್ನು ಸಿದ್ದರಾಮಯ್ಯ ಅವರು ಶುಕ್ರವಾರವೇ ರಾಜ್ಯಪಾಲ ವಿ.ಆರ್. ವಾಲಾ ಅವರಿಗೆ ಶಿಫಾರಸು ಮಾಡಲಿದ್ದಾರೆ ಎಂದು ಹೇಳಲಾಗಿದೆ. ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಲೋಕಾಯುಕ್ತ ಹುದ್ದೆಗೆ ನ್ಯಾಯಮೂರ್ತಿಗಳಾದ ವಿಕ್ರಂಜಿತ್ ಸೆನ್ ಹಾಗೂ ಎಸ್.ಆರ್.ನಾಯಕ್ ಅವರ ಹೆಸರುಗಳನ್ನು ಅಂತಿಮವಾಗಿ ಪರಿಗಣಿಸಲಾಗಿತ್ತು. ಆ ಸಭೆಯಲ್ಲಿ ಇಬ್ಬರ ಬಗ್ಗೆಯೂ ಮಿಶ್ರ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಈ ಹಿನ್ನೆಲೆಯಲ್ಲಿ ಅಂತಿಮ ನಿರ್ಧಾರವನ್ನು ಮುಖ್ಯಮಂತ್ರಿ ವಿವೇಚನೆಗೆ ಬಿಡಲಾಗಿತ್ತು.
ಏತನ್ಮಧ್ಯೆ, ತಮ್ಮ ಹೆಸರು ಶಿಫಾರಸುಗೊಂಡ ಬಳಿಕ ಪರವಿರೋಧ ಅಭಿಪ್ರಾಯಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಹುದ್ದೆ ಅಲಂಕರಿಸಲು ತಮಗೆ ಇಷ್ಟವಿಲ್ಲವೆಂದು ನ್ಯಾ. ವಿಕ್ರಂಜಿತ್ ಸೆನ್ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಮೂಲಗಳ ಪ್ರಕಾರ ಬುಧವಾರವೇ ಅವರು ಈ ಪತ್ರ ಬರೆದಿದ್ದಾರೆ. ಹೀಗಾಗಿ ಅಂತಿಮವಾಗಿ ಎಸ್.ಆರ್.ನಾಯಕ್ ಒಬ್ಬರದೇ ಹೆಸರು ಉಳಿದಿರುವುದರಿಂದ ಸರ್ಕಾರಕ್ಕೆ ಅವರ ಹೆಸರನ್ನು ರಾಜ್ಯಪಾಲರಿಗೆ ಶಿಫಾರಸು ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ.
ಒಂದು ವೇಳೆ ರಾಜ್ಯಪಾಲರು ಒಪ್ಪಿಗೆ ಸೂಚಿಸಿದರೆ ಮುಂದಿನ ಲೋಕಾಯುಕ್ತರಾಗಿ ನ್ಯಾ. ಎಸ್.ಆರ್ .ನಾಯಕ್ ನೇಮಕವಾಗುವುದು ಬಹುತೇಕ ಖಚಿತವಾಗಿದೆ. ನ್ಯಾ.ವಿಕ್ರಂಜಿತ್ ಸೆನ್ ಹೆಸರನ್ನು ಹೈಕೋರ್ಟ್ ಹಂಗಾಮಿ ಮುಖ್ಯನ್ಯಾಯಮೂರ್ತಿ ಎಸ್.ಕೆ. ಮುಖರ್ಜಿ ಅವರು ಸೂಚಿಸಿದ್ದರು. ಇದಕ್ಕೆ ವಿರೋಧ ಪಕ್ಷವಾದ ಬಿಜೆಪಿ ಕೂಡ ಸಮ್ಮತಿ ನೀಡಿತ್ತು. ಆದರೆ ಸ್ಪೀಕರ್ ಕಾಗೋಡು ತಿಮ್ಮಪ್ಪ ನ್ಯಾ.ಎಸ್. ನಾಯಕ್ ಹೆಸರು ಸೂಚಿಸಿದ್ದರು. ಈ ಮಧ್ಯೆ, ಕನ್ನಡಿಗರನ್ನೇ ಲೋಕಾಯುಕ್ತ ರನ್ನಾಗಿ ನೇಮಿಸಬೇಕೆಂಬ ಒತ್ತಡ ಇದೆ ಎಂದು ಸಿಎಂ ಕೂಡ ಹೇಳಿದ್ದರು.