ಜಿಲ್ಲಾ ಸುದ್ದಿ

ನಿರುದ್ಯೋಗಿಗಳಿಗೆ ವಂಚಿಸುತ್ತಿದ್ದವನ ಬಂಧನ

Srinivasamurthy VN

ಬೆಂಗಳೂರು: ನಕಲಿ ನೇಮಕಾತಿ ಪತ್ರ, ಪ್ರಮಾಣ ಪತ್ರ, ಗುರುತಿನ ಚೀಟಿ ಸೃಷ್ಟಿಸಿ ನಿರುದ್ಯೋಗಿಗಳಿಗೆ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ಕೊಡಿಸುತ್ತಿದ್ದ ಜಾಲವೊಂದರ ಮೇಲೆ ದಾಳಿ ನಡೆಸಿರುವ ಕೇಂದ್ರ ಅಪರಾಧ ವಿಭಾಗದ(ಸಿಸಿಬಿ) ಪೊಲೀಸರು, ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ.

ಕಸ್ತೂರಿನಗರದ ಕಂಡಿಪಟ್ಟಿ (35) ಬಂಧಿತ ಆರೋಪಿ. ಮೂಲತಃ ಆಂಧ್ರಪ್ರದೇಶದ ತಡ ಮಂಡಲದ ಆರೋಪಿಯು ನಗರದ ಕಸ್ತೂರಿನಗರ ಈಸ್ಟ್ ಆಫ್ಎನ್‍ಜಿಇಎಫ್ ನಲ್ಲಿ ಮೇನಿಕ್ಯೂ
ಸಾಫ್ಟ್ ವೇರ್ ಸೆಲ್ಯೂಷನ್ಸ್ ಮತ್ತು ಎಕೋನಿಕ್ಸ್ ಟೆಕ್ನಾಲಜೀಸ್ ಹೆಸರಿನಲ್ಲಿ ಕಚೇರಿ ತೆರೆದಿದ್ದ. ನಿರುದ್ಯೋಗಿ ಯುವಕರಿಂದರು.10- ರಿಂದರು.15 ಸಾವಿರ ಹಣ ಪಡೆದು ನಕಲಿ ನೇಮಕಾತಿ ಪತ್ರ, ವೇತನ ಪ್ರಮಾಣ ಪತ್ರ, ಬಿಡುಗಡೆ ಪತ್ರ, ಗುರುತಿನ ಚೀಟಿ ನೀಡುವ ಮೂಲಕ ಅಕ್ರಮವಾಗಿ ಹಣಗಳಿಸುತ್ತಿದ್ದ. ಈ ಕುರಿತು ಮಾಹಿತಿ ಸಂಗ್ರಹಿಸಿದ ಸಿಸಿಬಿ ಪೊಲೀಸರು ಆರೋಪಿಯ ಎರಡು ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಕಂಪ್ಯೂಟರ್, ಲ್ಯಾಪ್‍ಟಾಪ್ ಸೇರಿದಂತೆ ಕೆಲ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ.

ಪಾಲುದಾರಿಕೆಯಲ್ಲಿ ಕಳೆದ ಒಂದು ವರ್ಷದ ಹಿಂದೆ ಕಂಪನಿ ಆರಂಭಿಸಿದ್ದ ಆರೋಪಿಯು ಈ ಅವಧಿಯಲ್ಲಿ ಸುಮಾರು 500 ಮಂದಿ ನಿರುದ್ಯೋಗಿ ಯುವಕರಿಗೆ ನಕಲಿ ದಾಖಲೆಗಳನ್ನು ನೀಡಿ ಹಣ ಪಡೆದಿದ್ದಾನೆ. ನಿರುದ್ಯೋಗಿಗಳು ಇಂದಿಗೂ ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ವಿಚಾರಣೆಯಿಂದ ತಿಳಿದು ಬಂದಿದೆ. ಪಾಲುದಾರರಾದ ವಿಶ್ವನಾಥ್ ರೆಡ್ಡಿ, ಮೋಹನ ಮತ್ತು ಜಯಕುಮಾರ್ ತಲೆಮರೆಸಿಕೊಂಡಿರುವ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

SCROLL FOR NEXT