ಜಿಲ್ಲಾ ಸುದ್ದಿ

ನ್ಯಾಯಾಂಗದ ಕೋಟೆಯನ್ನು ಒಡೆಯುತ್ತಿರುವ ಪಟ್ಟಭದ್ರರು

Manjula VN

ಬೆಂಗಳೂರು: ಜಾತಿ, ಹಣ, ರಾಜಕೀಯ ಮತ್ತು ತೋಳ್ಬಲಗಳಂಥ ಪಟ್ಟಭದ್ರ ಹಿತಾಸಕ್ತಿಗಳು ನ್ಯಾಯಾಂಗದ ಕೋಟೆ ಒಡೆಯುವುದಕ್ಕೆ ಯತ್ನಿಸುತ್ತಿವೆ ಎಂದು ಹಿರಿಯ ನ್ಯಾಯಮೂರ್ತಿ ಡಾ.ಎನ್.ಕುಮಾರ್ ವಿಷಾದ ವ್ಯಕ್ತಪಡಿಸಿದ್ದಾರೆ.

ಅಲಾಯನ್ಸ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್‍ಗೆ ಭಾಜನರಾಗಿರುವ ಹಿನ್ನೆಲೆಯಲ್ಲಿ ಭಾರತೀಯ ವಿದ್ಯಾಭವನ ಮತ್ತು ಅತಿಥೇಯರ ಸಮಿತಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ನ್ಯಾಯಾಂಗದ ವ್ಯವಸ್ಥೆಯ ಮೇಲೆ ನಡೆಯುತ್ತಿರುವ ಈ ಎಲ್ಲ ಒತ್ತಡಗಳಲ್ಲಿ ಮೆಟ್ಟಿನಿಂತು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕಾಗಿದೆ. ಯಾವುದೇ ಒತ್ತಡಕ್ಕೆ ಮಣಿಯದೆ ನ್ಯಾಯದಾನ ಮಾಡುವ ಕೆಲಸ ನ್ಯಾಯಾಲಯಗಳು ಮಾಡಬೇಕಾಗಿದೆ ಎಂದು ಅವರು ನುಡಿದರು.

ನ್ಯಾಯಾಂಗ ಕ್ಷೇತ್ರದಲ್ಲಿ ನಿಷ್ಪಕ್ಷಪಾತ, ಪ್ರಾಮಾಣಿಕವಾಗಿ ಸೇವೆ ಮಾಡಿದಲ್ಲಿ ಸಮಾಜ ಗುರುತಿಸುತ್ತದೆ. ತಮ್ಮ ಸೇವಾವಧಿಯಲ್ಲಿ ಮಾಡಿದ ನಿಷ್ಪಕ್ಷಪಾತ ನ್ಯಾಯದಾನ ಮತ್ತು ಸಾಮಾಜಿಕ ಸೇವೆಯಿಂದಾಗಿ ಇಂದು ನನಗೆ ಈ ಗೌರವ ಸಿಕ್ಕಿದೆ. ಈ ಸನ್ಮಾನ ನ್ಯಾಯಾಂಗ ವ್ಯವಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಹಿರಿಯ ವಕೀಲರು, ನ್ಯಾಯಾಧೀಶರು ಮತ್ತು ಮುಂದಿನ ಪೀಳಿಗೆಗೆ ಮಾರ್ಗದರ್ಶನವಾಗಲಿದೆ ಎಂದರು. ಹೃದ್ರೋಗ ತಜ್ಞ ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ಬೆಂಗಳೂರು ನಗರದಲ್ಲಿ ಹೃದಯ ಮತ್ತು ಮೆದುಳು ಆಸ್ಪತ್ರೆಗಳನ್ನು ಸ್ಥಾಪನೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಅವರು ಇದೇ ವೇಳೆ ಬೇಸರ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ನೂರಾರು ಗರ್ಭಿಣಿಯರು ಮತ್ತು ಸಾವಿರಾರು ಸಣ್ಣ ಮಕ್ಕಳು ಒಂದು ವರ್ಷ ತುಂಬುವುದಕ್ಕೆ ಮುನ್ನವೇ ಸಾಯುತ್ತಿದ್ದಾರೆ. ರಾಜ್ಯದ ಶೇ.60 ಜನ ಗ್ರಾಮೀಣ ಭಾಗದಲ್ಲಿ
ಕಾರ್ಯನಿರ್ವಹಿಸುತ್ತಿದ್ದು, ಅವರಿಗೆ ಸೂಕ್ತ ವೈದ್ಯಕೀಯ ಸೇವೆ ಸಿಗುತ್ತಿಲ್ಲ. ಈ ಬಗ್ಗೆ ನ್ಯಾಯಾಂಗ ವ್ಯವಸ್ಥೆ ಗಮನಹರಿಸಬೇಕು. ಅಲ್ಲದೆ, ಎಲ್ಲರಿಗೂ ಆರೋಗ್ಯ ಸೇವೆ ಸಿಗುವಂತೆ
ಮಾಡಬೇಕಾಗಿದೆ ಎಂದರು. ನಿಘಂಟು ತಜ್ಞ ಪೊ್ರ.ವೆಂಕಟಸುಬ್ಬಯ್ಯ, ಮನಃ ಶಾಸ್ತ್ರಜ್ಞ ಡಾ.ಗಂಗಾಧರ್, ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಮಲ್ಲೇಪುರಂ ಜಿ.ವೆಂಕಟೇಶ್, ಮಾಜಿ ಕ್ರಿಕೆಟ್ ಪಟು ಜಾವಗಲ್ ಶ್ರೀನಾಥ್ ಸೇರಿದಂತೆ ಹೈಕೋರ್ಟ್‍ನ ಹಲವು ನ್ಯಾಯಮೂರ್ತಿಗಳು ಮತ್ತು ಹಿರಿಯ ವಕೀಲರು ಇದ್ದರು.

SCROLL FOR NEXT