ಜಿಲ್ಲಾ ಸುದ್ದಿ

ಕೋಲಾರ: ಶವ ಯಾತ್ರೆ ವೇಳೆ ಜೇನುನೋಣಗಳ ದಾಳಿ; ಇಬ್ಬರ ಸ್ಥಿತಿ ಗಂಭೀರ

Srinivasamurthy VN

ಕೋಲಾರ: ಶವದ ಅಂತ್ಯ ಸಂಸ್ಕಾರದ ಮೆರವಣಿಗೆ ವೇಳೆ ಜೇನು ನೊಣಗಳು ದಾಳಿ ನಡೆಸಿದ ಪರಿಣಾಮ ಶವಯಾತ್ರೆಯಲ್ಲಿ ಪಾಲ್ಗೊಂಡಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಭಾನುವಾರ ಕೋಲಾರದಲ್ಲಿ ನಡೆದಿದೆ.

ನಿನ್ನೆ ಸಾವಿಗೀಡಾಗಿದ್ದ ವ್ಯಕ್ತಿಯ ಅಂತಿಮ ವಿಧಿವಿಧಾನಕ್ಕಾಗಿ ಶವವನ್ನು ಸುಮಾರು 15 ಮಂದಿಯ ತಂಡ ಚಿತಾಗಾರಕ್ಕೆ ಕೊಂಡೊಯ್ಯುತ್ತಿದ್ದರು. ಈ ವೇಳೆ ನೂರಾರು ಜೇನುನೊಣಗಳು ಇದ್ದಕ್ಕಿದ್ದಂತೆಯೇ ಅವರ ಮೇಲೆ ದಾಳಿ ಮಾಡಿವೆ. ಜೇನುನೊಣಗಳು ದಾಳಿ ಮಾಡುತ್ತಿದ್ದಂತೆಯೇ ಶವವನ್ನು ಹೊತ್ತಿದ್ದ ಮಂದಿ ಅದನ್ನು ಅಲ್ಲಿಯೇ ಬಿಟ್ಟು ಓಡಿಹೋದರು. ಸತತ ಮೂರುಗಂಟೆಯ ಬಳಿಕ ಜೇನುನೊಣಗಳ ಹಾರಾಟ ಕಡಿಮೆಯಾದ ನಂತರ ಮತ್ತೆ ಬಂದು ಶವ ಸಂಸ್ಕಾರವನ್ನು ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಮೃತ ವ್ಯಕ್ತಿಯ ಸಂಬಂಧಿಗಳ ಪ್ರಕಾರ ಘಟನೆಯಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದೇವೆ. ವೈದ್ಯರು ಅವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಿದ್ದಾರೆ  ಎಂದು ತಿಳಿಸಿದ್ದಾರೆ. ಇನ್ನು ಶವಯಾತ್ರೆ ವೇಳೆ ಮೃತ ವ್ಯಕ್ತಿ ಸಂಬಂಧಿ ಹಿಡಿದಿದ್ದ ಹೊಗೆಯ ಪಾತ್ರೆಯಿಂದ ಹೊರಬರುತ್ತಿದ್ದ ಹೊಗೆಯಿಂದ ಕೆರಳಿದ ಜೇನುನೊಣಗಳು ಜನರ ಗುಂಪಿನ ಮೇಲೆ  ದಾಳಿ ಮಾಡಿವೆ ಎಂದು ಹೇಳಲಾಗುತ್ತಿದೆ.

ಕಳೆದ ಡಿಸೆಂಬರ್ 18ರಂದು ಚಾಮುಂಡಿಪುರದ ಬಳಿ ಇರುವ ಸೆಂಟ್ ಜೊಸೆಫ್ ಕಾಲೇಜು ಮೈದಾನದಲ್ಲಿಯೂ ಇಂತಹುದೇ ಘಟನೆ ನಡೆದಿತ್ತು. ಅದೃಷ್ಟವಶಾತ್ ಈ ದಾಳಿಯಲ್ಲಿ ಯಾರೂ  ಗಂಭೀರವಾಗಿ ಗಾಯಗೊಂಡಿರಲಿಲ್ಲ

SCROLL FOR NEXT