ಜಿಲ್ಲಾ ಸುದ್ದಿ

ಕನ್ನಡ ಚಿತ್ರರಂಗದಲ್ಲಿ ಡಬ್ಬಿಂಗ್ ಸಂಸ್ಕೃತಿಗೆ ಅವಕಾಶ ನೀಡಲ್ಲ: ಸಾ.ರಾ. ಗೋವಿಂದು

Srinivas Rao BV

ಕೆ ಆರ್ ನಗರ: ಕನ್ನಡ ಚಿತ್ರರಂಗದಲ್ಲಿ ಡಬ್ಬಿಂಗ್ ಸಂಸ್ಕೃತಿ ಬೆಳೆಯಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಈ ವಿಚಾರವಾಗಿ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳುವ ಜತೆಗೆ, ಸ್ಕ್ರೀನಿಂಗ್ ಕಮಿಟಿಯನ್ನು ಮತ್ತೆ ಅನುಷ್ಠಾನಕ್ಕೆ ತರುವುದಾಗಿ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಹೇಳಿದರು.

ಪಟ್ಟಣದ ಪುರಸಭಾ ಬಯಲು ರಂಗಮಂದಿರದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ವತಿಯಿಂದ ಆಯೋಜಿಸಿದ್ದ ಬೆಳ್ಳಿಹೆಜ್ಜೆ ಕಾರ್ಯಕ್ರಮದ ಸಂವಾದದಲ್ಲಿ ಮಾತನಾಡಿ, ಡಬ್ಬಿಂಗ್ ಸಂಸ್ಕೃತಿಯ ವಿರುದ್ಧ ಹೋರಾಡಿದ ವರನಟ ಡಾ. ರಾಜ್‍ಕುಮಾರ್ ಅವರ ಆದರ್ಶ ಪಾಲನೆ ತಮ್ಮ ಕರ್ತವ್ಯ ಎಂದು ತಿಳಿಸಿದರು.

ಈ ವಿಚಾರಕ್ಕೆ ಸಂಬಂ„ಸಿ ತಾವು ಮಂಡಳಿ ಕಾರ್ಯದರ್ಶಿ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ಬಂದಿದ್ದೆ ಎಂದ ಅವರು, ಡಬ್ಬಿಂಗ್ ಸಂಸ್ಕೃತಿ ವಿರುದ್ಧ ಹೋರಾಡುವ ತಮಗೆ ರಾಜ್ಯದ ಕನ್ನಡಪರ ಸಂಘಟನೆಗಳು ಮತ್ತು ಹೋರಾಟಗಾರರು ಬೆನ್ನೆಲುಬಾಗಿ ನಿಲ್ಲಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಮುಂದೆ ಕನ್ನಡ ಚಲನಚಿತ್ರಗಳನ್ನು ಬೇರೆ ರಾಜ್ಯಗಳಲ್ಲೂ ಬಿಡುಗಡೆ ಮಾಡಲು ಅನುಕೂಲವಾಗುವಂತೆ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಚಲನಚಿತ್ರ ಅಕಾಡೆಮಿ ಜತೆಯಾಗಿ ಚೆನ್ನೈ ಚಲನಚಿತ್ರ ವಾಣಿಜ್ಯ ಮಂಡಳಿ ಜತೆ ಚರ್ಚಿಸಿದ್ದು,
ಅವರು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆಂದು ತಿಳಿಸಿದರು. ಚಿತ್ರನಟ ಅರುಣ್‍ಸಾಗರ್ ಮತ್ತು ಪತ್ರಕರ್ತ ಸದಾಶಿವಶೆಣೈ, ಎಸ್. ನಾರಾಯಣ್ ಸಂವಾದದದಲ್ಲಿ ಪಾಲ್ಗೊಂಡಿದ್ದರು. ನಂತರ ಚಲನಚಿತ್ರ ನೃತ್ಯ ನಿರ್ದೇಶಕರ ತಂಡದಿಂದ ನಡೆಸಿಕೊಟ್ಟ ನೃತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜನರ ಮನಸೂರೆಗೊಂಡವು.

ಶಾಸಕ ಸಾ.ರಾ. ಮಹೇಶ್, ಪತ್ರಕರ್ತ, ಟಿ. ವೆಂಕಟೇಶ್, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್.ವಿ. ರಾಜೇಂದ್ರಸಿಂಗ್‍ಬಾಬು, ನಟಿಯರಾದ ಜಯಮಾಲಾ, ಪ್ರಮೀಳಾ ಜೋಷಾಯ್, ನಟ ಸುಂದರ್‍ರಾಜ್, ನಿರ್ಮಾಪಕರ ಸಂಘದ ಅಧ್ಯಕ್ಷ ಆರ್. ಮುನಿರತ್ನ, ನಿರ್ದೇಶಕಎಸ್. ನಾರಾಯಣ್ ಇದ್ದರು.

SCROLL FOR NEXT