ಬೆಂಗಳೂರು: ಬೆಂಗಳೂರು ನಗರದ ಮತ್ತು ಗ್ರಾಮಾಂತರ ಪ್ರದೇಶದ ಕೆರೆಗಳ ಸಂಖ್ಯೆ ಎಷ್ಟು? ಒತ್ತುವರಿ ಎಷ್ಟು? ಯಾರ್ಯಾರಿಗೆ ನೊಟೀಸ್ ನೀಡಲಾಗಿದೆ? ಎಂಬ ವಿಸ್ತ್ರೃತ ವರದಿ ನೀಡದ ಸಂಬಂಧಪಟ್ಟ ತಹಸೀಲ್ದಾರ್, ಜಂಟಿ ನಿರ್ದೇಶಕರು ಹಾಗೂ ಅಧಿಕಾರಿಗಳಿಗೆ ಕೆರೆ ಒತ್ತುವರಿ ಪರಿಶೀಲನಾ ಸದನ ಸಮಿತಿಯು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಘಟನೆ ಸೋಮವಾರ ನಡೆಯಿತು.
ಸಮಿತಿ ಬಳಿ ಇರುವ ಕೆರೆಗಳ ಸಂಖ್ಯೆಗೂ ಸಂಬಂಧಪಟ್ಟ ತಹಸೀಲ್ದಾರ್ ನೀಡುವ ಮಾಹಿತಿಗೂ ತಾಳೆಯಾಗದಿದ್ದಾಗ ಅಂಕಿ ಸಂಖ್ಯೆಗಳನ್ನು ಸರಿಯಾಗಿ ಸಂಗ್ರಹಿಸದೆ ಯಾಕ್ರೀ ಸಭೆಗೆ ಹಾಜರಾಗ್ತೀರಿ, ಕೆಲವು ಅಧಿಕಾರಿಗಳು ಸುಮ್ಮನೆ ತಲೆಯಾಡಿಸಿದರೆ ಸಾಕು ನಡೆಯುತ್ತೆ ಎಂಬ ಮನೋಭಾವ ಹೊಂದಿದ್ದಾರೆ ಎಂದು ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಕೆರೆಗಳ ಒತ್ತುವರಿ ಸಮಗ್ರ ತನಿಖೆ ನಡೆಸಲು ರಚಿಸಲಾಗಿರುವ ವಿಧಾನ ಮಂಡಲದ ಸಮಿತಿ ಅಧ್ಯಕ್ಷ ಕೆ.ಬಿ.ಕೋಳಿವಾಡ ಆಕ್ರೋಶ ವ್ಯಕ್ತಪಡಿಸಿದರು.
ಕೆಂಪೇಗೌಡ ಬಡಾವಣೆಯಲ್ಲಿ ಕೆರೆ ಒತ್ತುವರಿಯಾಗಿದೆಯೇ?
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನೂತನವಾಗಿ ನಿರ್ಮಾಣ ಮಾಡುತ್ತಿರುವ ಕೆಂಪೇಗೌಡ ಬಡಾವಣೆಗೆ 14 ಕೆರೆಗಳನ್ನು ಒತ್ತುವರಿ ಮಾಡಲಾಗಿದೆ ಎಂಬ ಬಗ್ಗೆ ಮಾಧ್ಯಮಗಳಲ್ಲಿ ಆರೋಪ ಕೇಳಿ ಬರುತ್ತಿದೆ. 23 ಲೇ ಔಟ್ ಗಳನ್ನು ಮಾಡಿದ್ದು 14 ಕೆರೆಯಂಗಳ ಸೇರಿವೆ. ಸಮಿತಿ ಅಸ್ತಿತ್ವದಲ್ಲಿರುವಾಗಲೇ ಮತ್ತೊಂದು ಅನಾಹುತ ಸಂಭವಿಸುವುದು ಬೇಡ.ಬಿಡಿಎ ರಸ್ತೆ ಹಾಗೂ ನಿವೇಶನಕ್ಕಾಗಿ ರಾಮಸಂದ್ರ ಕೆರೆಗೆ ಸೇರಿದ 25 ಗುಂಟೆ ಜಮೀನನ್ನು ಒತ್ತುವರಿ ಮಾಡಲಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಈ ಬಗ್ಗೆ ಲಿಖಿತವಾಗಿ ವರದಿ ನೀಡುವಂತೆ ಬಿಡಿಎ ಆಯುಕ್ತರಿಗೆ ಸೂಚನೆ ನೀಡಿದರು.