ಜಿಲ್ಲಾ ಸುದ್ದಿ

ಮರಳು ಅಡ್ಡೆ ಮೇಲೆ ಆಪ್ ದಾಳಿ

Srinivas Rao BV

ಬೆಂಗಳೂರು: ಕಳೆದ ಒಂದೂವರೆ ವರ್ಷದಿಂದ ಕೆಂಗೇರಿಯ ಹೆಮ್ಮಿಗೆಪುರ ವಾರ್ಡ್ ನ ಗಾಣಗಲ್ಲು ಗ್ರಾಮದ ರಾಜಕಾಲುವೆಯ ಬಳಿ ನಡೆಯುತ್ತಿದ್ದ ಅಕ್ರಮ ಮರಳು ಫಿಲ್ಟರ್ ದಂಧೆಯ ಮೇಲೆ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಹಾಗೂ ಸ್ಥಳೀಯ ಪೊಲೀಸರು ದಾಳಿ ನಡೆಸಿದ್ದಾರೆ.
ಅಕ್ರಮ ಮರಳು ಫಿಲ್ಟರ್ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರು ಸ್ಥಳಿಯ ಪೊಲೀಸ್ ಹಾಗು ತಹಸೀಲ್ದಾರರಿಗೆ ಹಲವು ಬಾರಿ ದೂರು ನೀಡಲಾಗಿದೆ. ಆದರೆ ಅಧಿಕಾರಿಗಳು ಅವರೊಂದಿಗೆ ಶಾಮೀಲಾಗಿ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದರಿಂದ ಬೇಸತ್ತ ಸಾರ್ವಜನಿಕರು ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್ ದೊರೆಸ್ವಾಮಿ ಅವರಿಗೆ ವಿಷಯ ತಿಳಿಸಿದಾಗ ಅವರು ಎಎಪಿ ಮುಖಂದ ರವಿಕೃಷ್ಣ ರೆಡ್ಡಿ ಅವರ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ. ದಂಧೆಕೋರರು ಬಿಡಿಎ ಜಾಗದಲ್ಲಿ ಗುಂಡಿಗಳನ್ನು ತೆರೆದು ಚರಂಡಿಯಿಂದ ಹರಿದು ಬರುವ ನೀರಿನಿಂದ ಮರಳು ಫಿಲ್ಟರ್ ಮಾಡಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದರು. ಅಧಿಕಾರಿಗಳು ಅವರನ್ನು ಬಂಧಿಸದ ಕಾರಣ ಐದಾರು ಕಡೆ ರಾಜಾರೋಷವಾಗಿ ದಂಧೆ ನಡೆಸುತ್ತಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಾತಂತ್ರ್ಯ ಹೋರಾಟಗಾರ ಹೆಚ್ಎಸ್ ದೊರೆಸ್ವಾಮಿ ಸ್ಥಳಿಯರು ದೂರು ನೀಡಿದರೂ ದಂಧೆ ತಡೆಗೆ ಮುಂದಾಗದ ಅಧಿಕಾರಿಗಳ ವಿರುದ್ಧ ಕೂಡಲೇ ಕ್ರಮ ಜರುಗಿಸಬೇಕು. ಅಕ್ರಮ ನಡೆಸುತ್ತಿರುವ ಆರೋಪಿಗಳನ್ನು ಬಂಧಿಸಿ ಶಿಕ್ಷಿಸಬೇಕು. ರಾಜಧಾನಿಯಲ್ಲೇ ಈ ರೀತಿಯ ದಂಧೆಗಳು ನಡೆಯುತ್ತಿದ್ದರೂ, ಇದರ ವಿರುದ್ಧ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದನ್ನು ಖಂಡಿಸಿದರು.

SCROLL FOR NEXT