ಬೆಂಗಳೂರು: ಒಂದಂಕಿ ಲಾಟರಿ ಹಗರಣದ ಪ್ರಮುಖ ರೂವಾರಿಯಾಗಿರುವ ಹಗರಣದ ಕಿಂಗ್ ಪಿನ್ ಪಾರಿ ರಾಜನ್ ಕೊನೆಗೂ ಜಾಮೀನು ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾನೆ.
ರಾಜ್ಯ ರಾಜಕಾರಣ ಹಾಗೂ ಪೊಲೀಸ್ ಇಲಾಖೆಯಲ್ಲಿ ತಲ್ಲಣ ಮೂಡಿಸಿದ್ದ ಒಂದಂಕಿ ಲಾಟರಿ ಹಗರಣ ಕಿಂಗ್‌ಪಿನ್ ಪಾರಿ ರಾಜನ್ ಗೆ ಜಾಮೀನು ದೊರೆತಿದೆ. 9 ತಿಂಗಳು ಕಳೆದರೂ ಪೊಲೀಸರಿಂದ ಆರೋಪಪಟ್ಟಿ ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ ಸಿಬಿಐ ವಿಶೇಷ ಕೋರ್ಟ್ ಸೋಮವಾರ ಷರತ್ತುಬದ್ಧ ಜಾಮೀನು ನೀಡಿದೆ. ಅಕ್ರಮ ಲಾಟರಿ ದಂಧೆ ಆರೋಪದಲ್ಲಿ 2015ರ ಏಪ್ರಿಲ್ 30ರಂದು ಕೆಜಿಎಫ್ ನಲ್ಲಿ ಸಿಐಡಿ ಅಧಿಕಾರಿಗಳು ರಾಜನ್‌ನನ್ನು ಬಂಧಿಸಿದ್ದರು. ರಾಜನ್ ಜತೆಗೆ ಸಂಪರ್ಕ ಹೊಂದಿದ್ದ ಆರೋಪದಲ್ಲಿ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್‌ರನ್ನು ಅಮಾನತುಗೊಳಿಸಲಾಗಿತ್ತು.
ಪ್ರತಿಪಕ್ಷಗಳ ಒತ್ತಾಯದ ಮೇರೆಗೆ ಮೇ 27ರಂದು ರಾಜ್ಯ ಸರ್ಕಾರ ಲಾಟರಿ ದಂಧೆ ತನಿಖೆಯನ್ನು ಸಿಬಿಐಗೆ ವರ್ಗಾಯಿಸಿತ್ತು. ಎರಡೂವರೆ ತಿಂಗಳ ನಂತರ ಸಿಬಿಐ ತನಿಖೆ ನಡೆಸಲು ಹಸಿರು ನಿಶಾನೆ ತೋರಿ ಎಫ್ ಐಆರ್ ದಾಖಲಿಸಿಕೊಂಡಿತ್ತು. ಆದರೆ, ಬಂಧನವಾಗಿ 9 ತಿಂಗಳು ಕಳೆದರೂ ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಸಿರಲಿಲ್ಲ. ಇದೇ ಕಾರಣವನ್ನು ಮುಂದಿಟ್ಟುಕೊಟ್ಟುಕೊಂಡು ರಾಜನ್ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ. ವಿಚಾರಣೆ ನಡೆಸಿದ ನ್ಯಾಯಾಲಯ ಸೋಮವಾರ ಅರ್ಜಿ ಪುರಸ್ಕರಿಸಿ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.