ಜಿಲ್ಲಾ ಸುದ್ದಿ

ಪೊಲೀಸ್ ವಶಕ್ಕೆ ಬನ್ನಂಜೆ

Manjula VN

ಬೆಂಗಳೂರು: ಭೂಗತ ಪಾತಕಿ ಬನ್ನಂಜೆ ರಾಜಾನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಸಿಸಿಬಿ ಅಧಿಕಾರಿಗಳು, ಹೆಚ್ಚಿನ ವಿಚಾರಣೆಗಾಗಿ 14 ದಿನಗಳ ಕಾಲ ತಮ್ಮ ವಶಕ್ಕೆ ಪಡೆದಿದ್ದಾರೆ.

ಬಿಗಿ ಪೊಲೀಸ್ ಭದ್ರತೆಯಲ್ಲಿ ರಾಜಾನನ್ನು ನ್ಯಾಯಾಲಯಕ್ಕೆ ಕರೆತಂದ ಸಿಸಿಬಿ ಪೊಲೀಸರು, 3ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶ ಮೋಹನ್ ಪ್ರಭು ಅವರ ಮುಂದೆ ಹಾಜರುಪಡಿಸಿದರು. 1997ರಲ್ಲಿ ನಡೆದಿದ್ದ ಕದಿರೇನಹಳ್ಳಿ ಶೂಟೌಟ್ ಪ್ರಕರಣದ ಸಂಬಂಧ ರಾಜಾನನ್ನು ಮನವಿ ಮಾಡಿದ್ದರು.

ಮನವಿ ಆಲಿಸಿದ ನ್ಯಾಯಾಧೀಶರು, ಪ್ರಕರಣ ನಡೆದು 19 ವರ್ಷಗಳಾಗಿವೆ. ಈಗಲೂ ಆತನ ವಿಚಾರಣೆ ಅವಶ್ಯಕತೆ ಇದೆಯಾ? ಎಂದು ಪ್ರಶ್ನಿಸಿದರು. ಅಲ್ಲದೇ ಆರೋಪಿ ಪರಾರಿಯಾದ  ಬಗ್ಗೆ ಚಾರ್ಜ್ ಶೀಟ್ ಹಾಕಿದ 10 ವರ್ಷದೊಳಗೆ ಬಲವಾದ ಸಾಕ್ಷಿ. ಮಾಹಿತಿ ಲಭ್ಯವಾಗದಿದ್ದರೆ, ಆರೋಪಿಯನ್ನು ಖುಲಾಸೆ ಮಾಡಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಹೀಗಿರುವಾಗ ಬಾಡಿ ವಾರೆಂಟ್ ಮೇಲೆ ವಶಕ್ಕೆ ಪಡೆದು ವಿಚಾರಣೆ ನಡೆಸಲು ಸಾಧ್ಯವೇ? ಹೊರದೇಶದಲ್ಲಿದ್ದು ಕೊಲೆಯ ಹೊಣೆ ಹೊತ್ತರೆ ಅದನ್ನು ಪರಿಗಣಿಸಲು ಸಾಕ್ಷ್ಯ ಬೇಡವೇ ಎಂದು ಕೋರ್ಟ್ ಪ್ರಶ್ನಿಸಿತ್ತು. ಇದಕ್ಕೆ ಪ್ರತಿಯಾಗಿ ಸಿಸಿಬಿ ಅಧಿಕಾರಿಗಳು ನ್ಯಾಯಾಲಯಕ್ಕೆ ಬೇಕಾದ ಸಾಕ್ಷ್ಯಗಳನ್ನು ನೀಡಿದ್ದರಿಂದ, ಪರಿಶೀಲಿಸಿ 14 ದಿನಗಳ ಕಾಲ ಪೊಲೀಸ್ ವಶಕ್ಕೆ ಆದೇಶ ನೀಡಿದ್ದಾರೆ.

ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದ ರಾಜಾನನ್ನು ಬಾಡಿ ವಾರೆಂಟ್ ಮೂಲಕ ಸಿಸಿಬಿ ಏಸಿಪಿ ವೆಂಕಟೇಶ್ ಪ್ರಸನ್ನ ನೇತೃತ್ವದ ತಂಡ ತಮ್ಮ ವಶಕ್ಕೆ ಪಡೆದು ನಗರಕ್ಕೆ ಕರೆತಂದು ಪರಪ್ಪನ ಅಗ್ರಹಾರದಲ್ಲಿಟ್ಟಿದ್ದರು. ಗುರುವಾರ ಬೆಳಗ್ಗೆ ಬನ್ನಂಜೆ ರಾಜಾಗೆ ಬುಲೆಟ್ ಪ್ರೂಫ್ ಜಾಕೆಟ್ ತೊಡಿಸಿ, ಪರಪ್ಪನ ಅಗ್ರಹಾರದಿಂದ ನ್ಯಾಯಾಲಯದವರಿಗೆ ಸಿಗ್ನಲ್ ಫ್ರೀ ಮೂಲಕ ಕೋರ್ಟ್ ಗೆ ಕರೆತರಲಾಯಿತು.

SCROLL FOR NEXT