ಮತ್ತೀಕೆರೆ ಜಯರಾಮ್
ರಾಮನಗರ: ಬಯಲುಸೀಮೆಗೆ ಸೇರಿದ ರೇಷ್ಮೆನಾಡು ರಾಮನಗರ ಜಿಲ್ಲೆಯು ಭೀಕರ ಬರದಿಂದ ತತ್ತರಿಸಿದೆ. ಬೇಸಿಗೆಗೆ ಮುನ್ನವೇ ಇಲ್ಲಿ ಜಲಕ್ಷಾಮ ಎದುರಾಗಿದ್ದು, ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಕಾಯಿ ಕಚ್ಚುತ್ತಿರುವ ಮಾವು ಮತ್ತು ತೆಂಗು ಉಳಿಸಿಕೊಳ್ಳಲು ರೈತರು ಟ್ಯಾಂಕರ್ಗಳ ಮೂಲಕ ನೀರು ಪೂರೈಸುತ್ತಿದ್ದಾರೆ.
ನದಿ, ತೊರೆ, ಕೆರೆ, ಕಟ್ಟೆಗಳು, ಬಾವಿಗಳು ಬರಿದಾಗಿವೆ. ಸಾವಿರ ಅಡಿಯಷ್ಟು ಆಳದವರೆಗೆ ಕೊರೆದರೂ ಬೋರ್ವೆಲ್ಗಳಲ್ಲಿ ನೀರಿಲ್ಲ. ಹಿಂದೆಂದೂ ಕಂಡರಿಯದ ಘೋರ ಬರದಿಂದ ಜಾನುವಾರುಗಳಿಗೂ ಮೇವು, ನೀರಿಲ್ಲ. ಗಿಡ, ಬಳ್ಳಿಗಳೆಲ್ಲ ಒಣಗಿವೆ. ಮಾವಿನ ಹೂ, ತೆಂಗಿನ ಹೊಂಬಾಳೆ ಒಣಗಿ ಉದುರುತ್ತಾ ರೈತರಲ್ಲಿ ಕಣ್ಣೀರು ಹರಿಸಿದೆ.
ಎಂಥದ್ದೇ ಸಂಕಟ ಸ್ಥಿತಿಯಲ್ಲೂ ಸಂಕಷ್ಟ ಸ್ಥಿತಿಯಲ್ಲೂ ಕೈ ಹಿಡಿಯುತ್ತಿದ್ದ ಕಲ್ಪವೃಕ್ಷ(ತೆಂಗು)ಗಳಲ್ಲಿ ಕಾಯಿ ಕಚ್ಚುತ್ತಿಲ್ಲ. ಈ ಬಾರಿ ಏರು ಹಂಗಾಮದಿಂದ ಹೇರಳವಾಗಿ ಕಚ್ಚಿರುವ ಮಾವಿನ ಹೂ ತೇವಾಂಶ ಕೊರತೆಯಿಂದ ನೆಲಕ್ಕೆ ಉದುರುತ್ತಿವೆ. ರಾಮನಗರ ಜಿಲ್ಲೆಯ ಸಾಕಷ್ಟು ಭಾಗವು ಬೆಟ್ಟ-ಗುಡ್ಡಗಳಿಂದ ಆವರಿಸಿದೆ. ಕಲ್ಲು ಮಿಶ್ರಿತ ಗಡುಸು ಭೂಮಿಯಲ್ಲಿ ನೆಟ್ಟಿರುವ ಮಾವಿನ ಮರಗಳೇ ಒಣಗಿ ಹೋಗುತ್ತಿವೆ. ಅಂತೆಯೇ ತೆಂಗಿನ ಸುಳಿ ಸತ್ತು, ಆ ಮರಗಳೂ ಬೋಡಾಗಿ ನಿಂತಿವೆ. ರೈತರು ಈಗ ನೀರು ಖರೀದಿಸಿ, ಅಳಿವಿನಂಚಿಗೆ ತಲುಪಿರುವ ವೃಕ್ಷಗಳಿಗೆ ಎರೆದು ಅವನ್ನು ಉಳಿಸಿಕೊಳ್ಳಲು ಭಗೀರಥ ಪ್ರಯತ್ನಕ್ಕೆ ಇಳಿದಿದ್ದಾರೆ.
ಟ್ಯಾಂಕರ್ ನೀರಿಗೆ 600: ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ವ್ಯವಸ್ಥೆ ಕೈಗೊಂಡು, ಜನ-ಜಾನುವಾರುಗಳ ದಾಹ ನೀಗಿಸುವ ಕೆಲಸ ಸಾಗಿದೆ. ಕುಡಿಯುವ ಉದ್ದೇಶಕ್ಕೆ ಪೂರೈಸುವ ಪ್ರತಿ ಟ್ಯಾಂಕರ್ ನೀರಿಗೆ ಜಿಲ್ಲಾಡಳಿತ ಸರಾಸರಿ 450ರಿಂದ 500 ನಿಗದಿಪಡಿಸಿದೆ. ಏತನ್ಮಧ್ಯೆ, ಫಸಲು ಮತ್ತು ಮರಗಳನ್ನು ಉಳಿಸಿಕೊಳ್ಳಲು ರೈತರು ಟ್ಯಾಂಕರ್ಗಳ ಮೊರೆ ಹೋಗಿರುವ ಪರಿಣಾಮ ಬೇಡಿಕೆ ಹೆಚ್ಚಿದೆ.
ಕೃಷಿ ಉದ್ದೇಶಕ್ಕೆ ಕೊಳವೆ ಬಾವಿ ಕೊರೆದು, ಸಫಲ ಆಗಿರುವ ಸೀಮಿತ ಸಂಖ್ಯೆಯ ರೈತರು ಇದೀಗ ನೀರು ಮಾರಾಟಕ್ಕೆ ಇಳಿದಿದ್ದಾರೆ. ಅವರೊಟ್ಟಿಗೆ ಟ್ಯಾಂಕರ್ ಮಾಲೀಕರು ಕರಾರು ಮಾಡಿಕೊಂಡು, ಪ್ರತಿ ಟ್ಯಾಂಕರ್ಗೆ 600 ದರದೊಂದಿಗೆ ಅಗತ್ಯವಿರುವ ರೈತರಿಗೆ ಪೂರೈಸುತ್ತಿದ್ದಾರೆ. ಬೇಸಿಗೆ ಸನಿಹವಾಗುತ್ತಿರುವ ಹಿನ್ನೆಲೆಯಲ್ಲಿ ದಿನ ಕಳೆದಂತೆ ಟ್ಯಾಂಕರ್ ನೀರಿನ ಧಾರಣೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.
ಕುಸಿದ ಮಳೆ ಪ್ರಮಾಣ: ಪ್ರತಿ ವರ್ಷ ಡಿಸೆಂಬರ್ನಲ್ಲಿ ಸೈಕ್ಲೋನ್, ಜನವರಿ ಮತ್ತು ಫೆಬ್ರವರಿಯಲ್ಲಿ ಅಕಾಲಿಕ ಮಳೆಯಾಗುತ್ತಿತ್ತು. ಈ ಮೂರು ತಿಂಗಳ ವಾರ್ಷಿಕ ವಾಡಿಕೆ ಮಳೆ ಪ್ರಮಾಣ ಸುಮಾರು 40 ಮಿ.ಮೀ. ಆಗಿದೆ. 2012-13ನೇ ಸಾಲಿನಲ್ಲಿ ಈ ಅವಧಿಯಲ್ಲಿ ಒಂದು ಹನಿ ಮಳೆಯೂ ಸುರಿದಿಲ್ಲ. ಮೊದಲೇ ಮುಂಗಾರು ಮತ್ತು ಹಿಂಗಾರು ದುರ್ಬಲವಾಗಿತ್ತು. ಇಷ್ಟಲ್ಲದೆ, ಕಳೆದ ದಶಕದಿಂದ ವಾರ್ಷಿಕ ಮಳೆ ಪ್ರಮಾಣವೂ ಇಳಿಕೆಯಾಗಿರುವುದು ಇಲ್ಲಿನ ಜಲಕ್ಷಾಮಕ್ಕೆ ಮೂಲ ಕಾರಣವಾಗಿದೆ.
ರಾಮನಗರ ಜಿಲ್ಲೆಯಲ್ಲಿ ಸುಮಾರು 20 ಸಾವಿರ ಹೆಕ್ಟೇರ್ನಲ್ಲಿ ಮಾವು, 12 ಸಾವಿರ ಹೆಕ್ಟೇರ್ನಲ್ಲಿ ತೆಂಗು ಬೆಳೆ ಇದೆ. ಒಣಗುತ್ತಿರುವ ಮರಗಳನ್ನು ಉಳಿಸಿಕೊಳ್ಳಲು ನೀರೆರೆಯುವುದು ಅಗತ್ಯ. ಆದರೆ, ಮಾವಿನ ಹೂ ಉದುರುವಿಕೆ ತಡೆಗೆ ಗಿಡಕ್ಕೆ ನೀರು ಪೂರೈಕೆ ಅವೈಜ್ಞಾನಿಕ. ಕಾಯಿ ಕಚ್ಚಿದ 3-4 ವಾರಗಳ ನಂತರ ನೀರೊದಗಿಸುವುದು ಸೂಕ್ತ.
ಟಿ ಡಾ. ಬಿ.ಕೃಷ್ಣ, ಉಪ ನಿರ್ದೇಶಕ, ತೋಟಗಾರಿಕೆ ಇಲಾಖೆ, ರಾಮನಗರ