ಆನೇಕಲ್ಲು: ಆನೇಕಲ್ ರೇಲ್ವೆ ನಿಲ್ದಾಣದಿಂದ 1 ಕೀ.ಮೀ. ದೂರದ ಕರ್ಪೂರು ಗೇಟ್ ಬಳಿ ಯುವತಿಯರಿಬ್ಬರು ಚಲಿಸುತ್ತಿದ್ದ ಕುರ್ಲಾ ಎಕ್ಸ್ಪ್ರೆಸ್ ರೈಲಿಗೆ ಸಿಲುಕಿ ಶುಕ್ರವಾರ ಮಧ್ಯಾಹ್ನ ಸಾವನ್ನಪ್ಪಿದ್ದಾರೆ.
ಈ ಪೈಕಿ ಒಬ್ಬರ ಕಾಲೇಜು ಐಡೆಂಟಿಟಿ ಕಾರ್ಡ್ ದೊರೆತಿದ್ದು, ತೇಜಸ್ವಿನಿ, ದ್ವಿತೀಯ ಪಿಯು ಕಾಮರ್ಸ್ ಎಂದು ನಮೂದಾಗಿದೆ. ಇನೊಬ್ಬ ವಿದ್ಯಾರ್ಥಿನಿ ಗುರುತು ಪತ್ತೆಯಾಗಿಲ್ಲ. ಆಕೆಯ ಬ್ಯಾಗಿನಲ್ಲಿ ಕ್ವಾಜ ಅವರ ಚಿತ್ರ ಹಾಗೂ ಉರ್ದು ಲಿಪಿಯ ಕಾರ್ಡ್ ಕಂಡುಬಂದಿದೆ.
ಬನ್ನೇರುಘಟ್ಟದ ಎಎಂಸಿ ಕಾಲೇಜಿನ ವಿದ್ಯಾರ್ಥಿನಿಯರಾದ ಇವರು ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಆನೇಕಲ್ ರೈಲು ನಿಲ್ದಾಣಕ್ಕೆ ಬಂದು ಬೆಂಗಳೂರಿಗೆ ರೈಲು ಇದೆಯಾ ಎಂದು ಸ್ಟೇಶನ್ ಮಾಸ್ಟರ್ ಸಮಿಉಲ್ಲಾ ಅವರನ್ನು ವಿಚಾರಿಸಿದ್ದರು. ಈಗ ಕುರ್ಲಾ ರೈಲು ಬರುತ್ತಿದ್ದು ಆನೇಕಲ್ನಲ್ಲಿ ನಿಲುಗಡೆ ಇಲ್ಲ ಎಂದಿದ್ದಾರೆ.
ಅಲ್ಲಿಂದ ರೇಲ್ವೆ ಹಳಿಯ ಮೇಲೆಯೇ ತೆರಳಿದ ಇವರು 5 ನಿಮಿಷದ ಅಂತರದಲ್ಲಿ ಸಾವನ್ನಪ್ಪಿದ್ದಾರೆ. ಹತ್ತಿರದಲ್ಲಿದ್ದ ರೈತನೊಬ್ಬ ರೈಲು ಬರುತ್ತಿರುವ ಬಗ್ಗೆ ಕೂಗಿ ಕೂಗಿ ಹೇಳಿದನಂತೆ. ಇಬ್ಬರೂ ಪರಸ್ಪರ ಕೈ ಹಿಡಿದುಕೊಂಡು ಹಳಿಯ ಮೇಲೆ ನಡೆಯುತ್ತಿದ್ದರು.