ರಾಮನಗರ: ಭಾರತದ ನೈಜ ಇತಿಹಾಸವನ್ನು ಜನ ಸಾಮಾನ್ಯರಿಗೆ ತಿಳಿಸುವ ಉದ್ದೇಶದಿಂದ ಆರ್ಯ ದ್ರಾವಿಡ ರಂಗ ಪ್ರಯೋಗ ಮಾಡಲಾಗುತ್ತಿದೆ ಎಂದು ರಂಗ ನಿರ್ದೇಶಕ ಗಿರೀಶ್ ಮಾಚಳ್ಳಿ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿರಂತರ 10 ಗಂಟೆಗಳ ಕಾಲ ನಡೆಯುವ ರಂಗ ಪ್ರಯೋಗಕ್ಕೆ 3 ರಂಗ ವೇದಿಕೆಗಳನ್ನು ನಿರ್ಮಾಣ ಮಾಡಲಾಗಿದೆ. ಒಂದು ವೇದಿಕೆಯಲ್ಲಿ ಕಾಡು, ಗುಹೆ, ಗೊಂಡಾರಗಳನ್ನು ನಿರ್ಮಾಣ ಮಾಡಲಾಗಿದೆ ಎಂದರು.
ಈ ಭಾಗದಲ್ಲಿ ಆದಿಮಾನವನ ಜನ್ಮ ವೃತ್ತಾಂತ ಹಾಗೂ ಮಾನವನ ಮೂಲಭೂತ ಸಂಘರ್ಷಗಳನ್ನು ತೋರಿಸಲಾಗುತ್ತದೆ. ಈ ವೇದಿಕೆಗೆ ಹೆತ್ತವರ ಅಂಗಳ ಎಂದು ಹೆಸರಿಡಲಾಗಿದೆ. ಎರಡನೇ ವೇದಿಕೆಯಲ್ಲಿ ಮಾನವ ಅಲೆಮಾರಿ ಜೀವನವನ್ನು ಬಿಟ್ಟು, ತನ್ನ ಆಹಾರದ ಮೂಲವನ್ನಾಗಿ ಭೂಮಿಯನ್ನು ಆಶ್ರಯಿಸಿದಾಗ ಸ್ಥಾವರವಾಗಿ ಒಂದು ಕಡೆ ಗುಡಿಸಲುಗಳಲ್ಲಿ ವಾಸಿಸಲು ಪ್ರಾರಂಭಿಸುತ್ತಾನೆ. ಸಾಂಸ್ಕೃತಿಕ ಸಂಘರ್ಷ, ಪ್ರಕೃತಿ ಮತ್ತು ಮಾನವನ ಅವಿನಾಭಾವ ಸಂಬಂಧ, ಧಾರ್ಮಿಕ ಚರ್ಯೆಗಳನ್ನು ಬಿಂಬಿಸಲಾಗುವುದು. ಈ ವೇದಿಕೆಗೆ ನಾಗನೆಲ ಎಂದು ಹೆಸರಿಡಲಾಗಿದೆ ಎಂದು ತಿಳಿಸಿದರು.