ಬೆಂಗಳೂರು ಗ್ರಾಮಾಂತರ

ಜಿಲ್ಲಾಡಳಿತಕ್ಕೂ ತಟ್ಟಿದ ನೀರು'ವರಿ'

ಮತ್ತೀಕೆರೆ ಜಯರಾಮ್
ರಾಮನಗರ: ನೀರಿನ ಬವಣೆ ಜಿಲ್ಲಾಡಳಿತ ಭವನಕ್ಕೂ ತಟ್ಟಿದೆ. ಇದ್ದೊಂದು ಕೊಳವೆ ಬಾವಿಯಲ್ಲಿ ನೀರು ಬತ್ತಿ ಹೋಗಿರುವ ಪರಿಣಾಮ ಭವನದ ಶೌಚಾಲಯಗಳನ್ನು ಬಂದ್ ಮಾಡಲಾಗಿದೆ.
 5 ದಿನದಿಂದ ಭವನಕ್ಕೆ ಬರುವ ಸಾರ್ವಜನಿಕರಷ್ಟೇ ಅಲ್ಲದೆ ಸಿಬ್ಬಂದಿಯೂ ಬಹಿರ್ದೆಸೆಗೆ ಬಯಲನ್ನೇ ಆಶ್ರಯಿಸಿದ್ದಾರೆ ಮನೆಗೊಂದು ಶೌಚಾಲಯ ನಿರ್ಮಿಸಿ ಬಯಲು ಬಹಿರ್ದೆಸೆಗೆ ಅಂತ್ಯವಾಡಲು ಸರ್ಕಾರ ಸಂಕಲ್ಪ ತೊಟ್ಟಿದೆ. ಆದರೆ, ಸರ್ಕಾರಿ ಕಚೇರಿಯಲ್ಲೇ ಶೌಚಾಲಯಗಳ ಕದ ಮುಚ್ಚಿ ಅಲ್ಲಿಗೆ ಬರುವ ಸಾರ್ವಜನಿಕರನ್ನು ಮಾತ್ರವಲ್ಲದೆ ಸಿಬ್ಬಂದಿಯೂ ಬಹಿರ್ದೆಸೆಗೆ ಬಯಲಿಗೆ ಅಟ್ಟಲ್ಪಟ್ಟಿರುವುದು ವಿಪರ್ಯಾಸದ ಸಂಗತಿ.  
ನಿತ್ಯ ನರಕಯಾತನೆ:  ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಕಚೇರಿ ಸಹಿತ 15ಕ್ಕೂ ಹೆಚ್ಚು ಇಲಾಖೆ ಕಚೇರಿಗಳಿದ್ದು, 500ಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ನಿತ್ಯ ಸಹಸ್ರಾರು ಸಾರ್ವಜನಿಕರು ತಮ್ಮ ಕೆಲಸಗಳಿಗಾಗಿ ಈ ಭವನಕ್ಕೆ ಬಂದು ಹೋಗುತ್ತಾರೆ. ಕಳೆದ ಸೋಮವಾರದಿಂದ ಸಿಬ್ಬಂದಿ, ಸಾರ್ವಜನಿಕರು ಬಳಸುತ್ತಿದ್ದ ಶೌಚಾಲಯಗಳನ್ನು ಮುಚ್ಚಿರುವುದರಿಂದ ಅವರ ಪಾಡು ಹೇಳ ತೀರದಾಗಿದೆ.
 ಮಹಿಳಾ ಸಿಬ್ಬಂದಿಯ ಸ್ಥಿತಿ ಶೋಚನೀಯವಾಗಿದೆ. ಅವರೆಲ್ಲರೂ ಜಿಲ್ಲಾಡಳಿತ ಭವನದಿಂದ ಒಂದಷ್ಟು ದೂರದಲ್ಲಿರುವ ಜಿಲ್ಲಾ ಪಂಚಾಯತ್ ಭವನಕ್ಕೆ ಹೋಗುವ ಅನಿವಾರ್ಯತೆ ಎದುರಾಗಿದೆ. ತಮ್ಮ ಕೆಲಸಗಳಿಗೆ ಬರುವ ಮಹಿಳೆಯರ ಗೋಳು ಕೇಳೋರಿಲ್ಲ.
ಬತ್ತಿದ ಕೊಳವೆ ಬಾವಿ: ರಾಮನಗರ ಜಿಲ್ಲೆಯಲ್ಲಿ ಕಳೆದೊಂದು ದಶಕದಿಂದಲೂ ಮಳೆ ಕೊರತೆ ಎದುರಾಗಿದ್ದು, ಅಂತರ್ಜಲ ಕುಸಿದಿದೆ. ಗ್ರಾಮೀಣ ಪ್ರದೇಶದಲ್ಲಿ ತಲೆದೋರಿರುವ ನೀರಿನ ಬವಣೆ ಅರಿಯಲು ಹವಾನಿಯಂತ್ರಿತ ಕಚೇರಿಯಿಂದ ಹೊರ ಹೋಗದ ಅಧಿಕಾರಿಗಳಿಗೆ ಇದೀಗ ಆ ಸಮಸ್ಯೆಯ ಬಿಸಿ ತಟ್ಟಿದೆ.
ಜಿಲ್ಲಾಡಳಿತ ಭವನಕ್ಕೆ ನೀರು ಸರಬರಾಜು ಮಾಡಲು ಕೊರೆಸಲಾಗಿದ್ದ ಕೊಳವೆ ಬಾವಿಯಲ್ಲಿ ಕಳೆದ ಶನಿವಾರವೇ ನೀರು ಬರುತ್ತಿರಲಿಲ್ಲ. ಮೋಟಾರ್ ಪಂಪ್ ಕೆಟ್ಟಿರಬಹುದೆಂದು ಮೇಲೆತ್ತಿ ರಿಪೇರಿ ಮಾಡಿ ಕೆಳಗಿಳಿಸಿದಾಗ ಕೊಳವೆ ಬಾವಿಯಲ್ಲಿ ನೀರಿನ ಇಳುವರಿ ಕುಸಿತವಾಗಿರುವುದು ತಿಳಿದು ಬಂದಿದೆ.
ಟ್ಯಾಂಕರ್ ಇಲ್ಲವೇ ಅಕ್ಕಪಕ್ಕದಲ್ಲಿರುವ ಕೊಳವೆ ಬಾವಿ ಮೂಲಕ ನೀರು ಸರಬರಾಜಿನ ಪರ್ಯಾಯ ವ್ಯವಸ್ಥೆ ಮಾಡುವ ಗೋಜಿಗೆ ಹೋಗದ ಅಧಿಕಾರಿಗಳು ನೀರಿಲ್ಲವೆನ್ನುವ ನೆಪವೊಡ್ಡಿ ಶೌಚಾಲಯದ ಬಾಗಿಲುಗಳನ್ನೇ ಮುಚ್ಚಿ, ಎಲ್ಲರನ್ನೂ ಬಹಿರ್ದೆಸೆಗೆ ಅಟ್ಟಿರುವುದು ಹೊಣೆಗೇಡಿತನವಾಗಿದೆ.
ಅಧಿಕಾರಿಗಳಿಗೆ ಬಾಧೆಯಿಲ್ಲ: ನೀರಿನ ಬವಣೆಯು ಆಯಕಟ್ಟಿನ ಹುದ್ದೆಯಲ್ಲಿರುವ ಅಧಿಕಾರಿಗಳನ್ನು ಮಾತ್ರ ಬಾಧಿಸುತ್ತಿಲ್ಲ. ಅವರೆಲ್ಲರೂ ತಮ್ಮ ಹವಾನಿಯಂತ್ರಿತ ಕೊಠಡಿಗಳಲ್ಲಿರುವ ಖಾಸಗಿ ಬಳಕೆಯ ಶೌಚಾಲಯಗಳಿಗೆ ಅಟೆಂಡರ್ ಮೂಲಕ ನೀರಿನ ವ್ಯವಸ್ಥೆ ಮಾಡಿಸಿಕೊಂಡು ತಮ್ಮ ದೇಹಬಾಧೆ ಇಳಿಸಿಕೊಳ್ಳುತ್ತಿದ್ದಾರೆ. ಮೋಟಾರ್ ಪಂಪ್ ಚಾಲನೆ ಮಾಡಿದಾಗ 10-12 ನಿಮಿಷ ಸ್ವಲ್ಪ ಪ್ರಮಾಣದಲ್ಲಿ ನೀರು ಬರುತ್ತದೆ. ಅದು ಅಧಿಕಾರಿಗಳ ಕೊಠಡಿಗಳಲ್ಲಿರುವ ಶೌಚಾಲಯಗಳ ಬಳಕೆಗೆ ಮೀಸಲಾಗಿದೆ.
 ಇನ್ನೂ ನೀರಿನ ಅಗತ್ಯ ಬಿದ್ದರೆ ಹೊತ್ತು ತರಲು ಹೇಗೂ ಸಿಬ್ಬಂದಿ ಇದ್ದಾರೆ. ಹೀಗಾಗಿ ಉಳಿದವರ ಪಾಡು ಅಧಿಕಾರಿಗಳಿಗೆ ಅರಿವಾಗಿಲ್ಲ.   ಸ್ವತಃ ತಮ್ಮ ಕಚೇರಿಯಿರುವ ಜಿಲ್ಲಾಡಳಿತ ಭವನದಲ್ಲೇ ನೀರಿನ ಸಮಸ್ಯೆಯನ್ನು ಇಷ್ಟು ದಿನವಾದರೂ ಪರಿಹರಿಸಿಕೊಳ್ಳಲಾಗದ ಜಿಲ್ಲಾಧಿಕಾರಿ ಮತ್ತು ಅಧೀನ ಅಧಿಕಾರಿಗಳು ಹಳ್ಳಿಗಳಲ್ಲಿ ನಿರಂತರವಾಗಿ ಸಮಸ್ಯೆಗೆ ತುತ್ತಾದ ಜನರ ಗೋಳಿಗೆ ಎಷ್ಟರ ಮಟ್ಟಿಗೆ ಸ್ಪಂದಿಸುತ್ತಾರೆ ಎನ್ನುವ ಪ್ರಶ್ನೆ ಸಹಜವಾಗಿಯೇ ಎದುರಾಗುತ್ತದೆ. ಒಳಗೆಲ್ಲಾ ಹುಳುಕು: ಮೇಲೆಲ್ಲಾ ಥಳಕು, ಒಳಗೆಲ್ಲಾ ಹುಳುಕು ಎನ್ನುವ ಸ್ಥಿತಿ ಜಿಲ್ಲಾಡಳಿತ ಭವನದ್ದಾಗಿದೆ.
 ಗುತ್ತಿಗೆದಾರನ ಕಳಪೆ ಕಾಮಗಾರಿಯಿಂದ ವಾರದಲ್ಲಿ 2-3 ಬಾರಿ ವಿದ್ಯುತ್ ಸಮಸ್ಯೆ ಕಾಡುತ್ತಲೇ ಇತ್ತು. ಕಚೇರಿಗೆ ಸ್ಥಳಾಂತರ ನಂತರವೂ ತಿಂಗಳಾನುಗಟ್ಟಲೆ ಇಂಟರ್ ನೆಟ್ ಸೌಲಭ್ಯ ಇಲ್ಲದಾಗಿತ್ತು. ಈಗ ಬತ್ತಿ ಹೋಗಿರುವ ಕೊಳವೆ ಬಾವಿಗೆ ಬಿಡಲಾಗಿರುವ ಮೋಟಾರ್ ಪಂಪ್ ಪದೇ ಪದೆ ಕೆಟ್ಟು ನಿಂತು, ಆಗಾಗ್ಗೆ ಶೌಚಾಲಯಕ್ಕೆ ಬೀಗ ಜಡಿಯಲಾಗುತ್ತಿತ್ತು. ಈಗ ನೀರಿನ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಳ್ಳಲಾಗದಷ್ಟು ಮಟ್ಟಿಗೆ ಜಿಲ್ಲಾಡಳಿತ ಬರಗೆಟ್ಟು ನಿಂತಿದೆ.
ಆರ್ಥಿಕ ಮುಗ್ಗಟ್ಟಿದೆಯೇ: ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಂದ ಪರೀಕ್ಷೆ ಮಾಡಿಸಿ ಬೇರೊಂದು ಕಡೆ ಕೊಳವೆ ಬಾವಿ ಕೊರೆಸಲು ಅಥವಾ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿಕೊಳ್ಳಲು ಜಿಲ್ಲಾಡಳಿತಕ್ಕೆ ಆರ್ಥಿಕ ಮುಗ್ಗಟ್ಟಿದೆಯೇ ಎನ್ನುವುದು ಸಿಬ್ಬಂದಿ ಹಾಗೂ ಸಾರ್ವಜನಿಕರ ಪ್ರಶ್ನೆಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!