ಆನೇಕಲ್ಲು: ಕ್ಷುಲ್ಲಕ ಕಾರಣಕ್ಕಾಗಿ ಮಗನೇ ಅಪ್ಪನನ್ನು ಇರಿದು ಕೊಂದ ದಾರುಣ ಘಟನೆ ಹುಳಿಮಾವು ಠಾಣಾ ವ್ಯಾಪ್ತಿಯ ಬನ್ನೇರುಘಟ್ಟ ರಸ್ತೆಯಲ್ಲಿ ನಡೆದಿದೆ.ಸಯ್ಯದ್ ಪಾಷ (60) ತನ್ನ ಮನೆಯ ಮುಂದೆಯೇ ಹೆಣವಾಗಿ ಬಿದ್ದಿದ್ದರು. ತಬ್ರೋಜ್ ಪಾಷ ಕೊಲೆ ಮಾಡಿದ ಮಗ ತಬ್ರೋಜ್ 2ನೇ ಹೆಂಡತಿಯ ಮಗನಾಗಿದ್ದು ಆಗಾಗ ಅಪ್ಪನ ಮನೆಗೆ ಬಂದು ಜಗಳ ಮಾಡುತ್ತಿದ್ದ. ಶನಿವಾರ ಮನೆಗೆ ಬಂದವನೇ ಜಗಳ ತೆಗೆದು ತನ್ನಲ್ಲಿದ್ದ ಚಾಕುವಿನಿಂದ ಇರಿದನು ಎಂದು 2ನೇ ಹೆಂಡತಿ ಮುಬೀನ ತಿಳಿಸಿದರು. ಗಾಯಗೊಂಡು ರಕ್ತ ಸ್ರಾವದಿಂದ ಮನೆಯ ಮುಂದೆ ಬಿದ್ದಿರುವ ಗಂಡನನ್ನು ಆಸ್ಪತ್ರೆಗೆ ಕರೆದೊಯ್ಯಲು ಆಟೋ ತರಲು ಹೋಗಿದ್ದ ಮುಬೀನ್ ಮನೆ ಬಳಿ ಬಂದಾಗ ಈಕೆಯೇ ಕೊಂದದ್ದು ಎಂದು ಸ್ಥಳಕ್ಕೆ ಬಂದ ಪೊಲೀಸರಿಗೆ ತಬ್ರೋಜ್ ತಿಳಿಸಿದ. ಹುಳಿಮಾವು ಪೊಲೀಸರು ಇಬ್ಬರನ್ನೂ ಠಾಣೆಗೆ ಕರೆದೊಯ್ಯು ವಿಚಾರಣೆ ನಡೆಸಿದರು. ಸ್ಥಳಕ್ಕೆ ಡಿಸಿಪಿ ಪವಾರ್ ಭೇಟಿ ನೀಡಿ ಮುಂದಿನ ಕ್ರಮಕ್ಕೆ ಆದೇಶಿಸಿದರು.
'ಶಾಲೆಗೆ ಮತ್ತೆ ಕರೆ ತನ್ನಿ'
ಸೂಲಿಬೆಲೆ: ಯಾವುದೇ ಮಗು ಶಾಲೆಯಿಂದ ಹೊರಗುಳಿಯದೇ ಕಡ್ಡಾಯವಾಗಿ ಶಿಕ್ಷಣವನ್ನು ಪಡೆಯಲು ಮಕ್ಕಳನ್ನು ಶಾಲೆಯತ್ತ ಕಳುಹಿಸಬೇಕು ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮುನಿರಾಜ್ ಹೇಳಿದ್ದಾರೆ.ಸೂಲಿಬೆಲೆಯ ಕುರುಬರಹಟ್ಟಿ ಸರ್ಕಾರಿ ಶಾಲೆ ಮಕ್ಕಳಿಂದ ಶಾಲೆ ಬಿಟ್ಟ ಮಕ್ಕಳನ್ನು ಶಾಲೆಯತ್ತ ಕರೆ ತರುವ ಉದ್ದೇಶದಿಂದ ಹಮ್ಮಿಕೊಂಡಿ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಶಿಕ್ಷಣ ಎನ್ನುವದು ಮನುಷ್ಯ ಬದಲಾವಣಿಗೆ ಇರುವ ಮಾರ್ಗವಾಗಿದೆ.ಇದನ್ನು ಪ್ರತಿಯೊಬ್ಬರು ಪಡೆಯುವ ಮೂಲಕ ಉತ್ತಮ ಸಮಾಜವನ್ನು ನಿರ್ಮಾಣ ಮಾಡಲು ಮುಂದಾಗಬೇಕು.ಎಷ್ಟುಸಂಪಾದನೆ ಮಾಡಿದ್ದೇವೆ ಎನ್ನುವದಕ್ಕಿಂತ ನಮ್ಮ ಮಕ್ಕಳಿಗೆ ಎಷ್ಟರ ಮಟ್ಟಿಗೆ ವಿದ್ಯೆಯನ್ನು ನೀಡಿದ್ದೇವೆ ಎಂಬುದು ಮುಖ್ಯವಾಗುತ್ತದೆ.ಶಿಕ್ಷಣಕ್ಕಾಗಿ ಸರ್ಕಾರ ಕೋಟ್ಯಂತರ ಹಣ ಖರ್ಚು ಮಾಡುತ್ತಿದ್ದು, ಗ್ರಾಮೀಣ ಭಾಗದ ಪೋಷಕರು ತಮ್ಮ ಮಕ್ಕಳಿಗೆ ಇದನ್ನು ಸಮರ್ಥವಾಗಿ ಬಳಿಸಿಕೊಳ್ಳಲು ಶಾಲೆಗೆ ಕಳುಹಿಸಬೇಕು ಎಂದರು.ನಿವೃತ್ತ ಮುಖ್ಯ ಶಿಕ್ಷಕ ದೇವದಾಸ್ ಸುಬ್ರಾಯ್ ಸೇಠ್ ಮಾತನಾಡಿ, ಶಿಕ್ಷಣವನ್ನು ಪಡೆಯಲು ಹಳ್ಳಿಗಾಡಿನ ಮಕ್ಕಳು ಹೆಚ್ಚು ಆಸಕ್ತಿಯನ್ನು ವಹಿಸಬೇಕು ಎಂದು ಹೇಳಿದರು.ಗ್ರಾಪಂ ಸದಸ್ಯೆ ಕವಿತಾ ಲಕ್ಷ್ಮಣ್, ಮಂಜುಳಾ ಮುನಿರಾಜ್, ಮುಖ್ಯ ಶಿಕ್ಷಕಿ ಲೀಲಾವತಿ ಸೇರಿದಂತೆ ಗ್ರಾಮದ ಮುಖಂಡರು ಭಾಗವಹಿಸಿದ್ದರು.