ಬೆಂಗಳೂರು: ವಿಳಾಸ ಕೇಳುವ ನೆಪದಲ್ಲಿ ಮಹಿಳೆಯರ ಸರ ದೋಚುತ್ತಿದ್ದ ಇಬ್ಬರನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೈಸೂರು ರಸ್ತೆ ಹಳೆಗುಡ್ಡದಹಳ್ಳಿ ನಿವಾಸಿ ಯೂನಿಸ್ (25) ಹಾಗೂ ಜೆ.ಜೆ. ನಗರ ಗೋರಿಪಾಳ್ಯದ ನವಾಜ್‌ಪಾ ಷ (22) ಬಂಧಿತರು. ಆರೋಪಿಗಳಿಂದ 6 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಸರಗಳವು, ದ್ವಿಚಕ್ರ ವಾಹನ ಕಳವು ಪ್ರಕರಣಗಳು ನಗರದ ವಿವಿಧ ಠಾಣೆಯಲ್ಲಿ ದಾಖಲಾಗಿವೆ. ಆರೋಪಿಗಳು ಒಂಟಿ ಮಹಿಳೆಯರನ್ನು ಹಿಂಬಾಲಿಸಿ, ವಿಳಾಸ ಕೇಳುವ ನೆಪದಲ್ಲಿ ಅವರನ್ನು ನಿಲ್ಲಿಸಿ ಸರ ದೋಚಿ ಪರಾರಿಯಾಗುತ್ತಿದ್ದರು. ಚಾಮರಾಜಪೇಟೆ, ಕೆಂಗೇರಿ, ಜ್ಞಾನಭಾರತಿ, ಮಾಗಡಿರಸ್ತೆ, ವಿಜಯನಗರ, ನಂದಿನಿ ಲೇಔಟ್, ರಾಮಮೂರ್ತಿ ನಗರ, ರಾಜರಾಜೇಶ್ವರಿ ನಗರ, ಮಹದೇವಪುರ ಸೇರಿದಂತೆ ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ಸರ ದೋಚಿರುವ ಬಗ್ಗೆ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದೇವಸ್ಥಾನಕ್ಕೆ ಟ್ರಸ್ಟಿ ನೇಮಕ ಪ್ರಕ್ರಿಯೆಗೆ ತಡೆಯಾಜ್ಞೆ
ಬೆಂಗಳೂರು: ಉಡುಪಿ ಜಿಲ್ಲೆ ಬ್ರಹ್ಮಾವರ ಬಳಿಯ ನೀಲಾವರದ ಮಹಿಷಾಸುರ ಮರ್ಧಿನಿ ದೇವಸ್ಥಾನಕ್ಕೆ ಒಂಬತ್ತು ಟ್ರಸ್ಟಿಗಳ ನೇಮಕ ಪ್ರಕ್ರಿಯೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಉಡುಪಿಯ ಶಾಸಕ ರಘುಪತಿ ಭಟ್ ಅವರ ಶಿಫಾರಸಿನ ಮೇರೆಗೆ ಟ್ರಸ್ಟಿಗಳನ್ನು ನಿಯಮ ಮೀರಿ ನೇಮಕ ಮಾಡಿಕೊಳ್ಳಲಾಗಿದೆ ಎಂದು ಆಕ್ಷೇಪಿಸಿ ಎಂ. ಚಿತ್ತರಂಜನ್ ಹೆಗ್ಡೆ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದನ್ಯಾ. ಸತ್ಯನಾರಾಯಣ ಅವರಿದ್ದ ಏಕಸದಸ್ಯ ಪೀಠ, ನೇಮಕ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಿದೆ. ಹಿಂದೂ ಧಾರ್ಮಿಕ ಸಂಸ್ಥೆ ಹಾಗೂ ದತ್ತಿ ಇಲಾಖೆ ವ್ಯಾಪ್ತಿಗೆ ಬರುವ ದೇಗುಲಕ್ಕೆ ಟ್ರಸ್ಟಿಗಳನ್ನು ನೇಮಕಕ್ಕೆ ಅರ್ಜಿ ಕರೆಯಬೇಕು. ನಂತರ ಅವರ ಕುರಿತು ಪೊಲೀಸ್ ಪರಿಶೀಲನೆ ನಡೆಯಬೇಕು. ನಂತರ ಟ್ರಸ್ಟಿಗಳ ಹೆಸರನ್ನು ಅಂತಿಮಗೊಳಿಸಬೇಕು. ಆದರೆ, ಈ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ರಾಜಕಾರಣಿಗಳ ಪ್ರಭಾವ ಬಳಸಿ ಟ್ರಸ್ಟಿಗಳನ್ನು ನೇಮಕ ಮಾಡಲಾಗಿದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು. ಎನ್. ಚಂದ್ರಶೇಖರ ಅಡಿಗ, ಬಿ. ಸುಪ್ರಸಾದ್ ಶೆಟ್ಟಿ, ಬಾಬು ದೇವಾಡಿಗ, ಸೂರ್ಯನಾರಾಯಣ ಗಾಣಿಗ, ಮಹೇಂದ್ರಕುಮಾರ್, ಭುವನೇಂದ್ರ ದೇವಾಡಿಗ, ಸತೀಶ್ ನಾಯ್ಕ, ಪ್ರೇಮಾವತಿ ಟಿ. ಉಲ್ಲೂರು ಹಾಗೂ ಭವಾನಿ ಪಿ. ಶೆಟ್ಟಿ ಅವರನ್ನು ದೇವಸ್ಥಾನದ ಟ್ರಸ್ಟಿಗಳಾಗಿ ಆಯ್ಕೆ ಮಾಡಲಾಗಿತ್ತು.
ಕಲುಷಿತ ನೀರು ಸೇವನೆ; 10 ಅಸ್ವಸ್ಥ
ಮಾಗಡಿ: ಕಲುಷಿತ ನೀರು ಸೇವನೆಯಿಂದ 10ಕ್ಕೂ ಹೆಚ್ಚು ಮಕ್ಕಳು ವಾಂತಿಭೇದಿಯಿಂದ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಮಾಗಡಿ ಪಟ್ಟಣದ ಹೊಂಬಾಳಮ್ಮನಪೇಟೆಯಲ್ಲಿ ಸುಮಾರು 10ಕ್ಕೂ ಹೆಚ್ಚು ಮಕ್ಕಳು ಕಲುಷಿತ ನೀರು ಸೇವನೆಯಿಂದ ಮಕ್ಕಳು ವಾಂತಿ ಭೇದಿಯಿಂದ ಅಸ್ವಸ್ಥರಾಗಿದ್ದು, ಅವರನ್ನು ಮಾಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಚಿಕಿತ್ಸೆ ಪಡೆದ ನಂತರ ಅಸ್ವಸ್ಥಗೊಂಡಿದ್ದ ಮಕ್ಕಳು ಚೇತರಿಸಿಕೊಂಡಿದ್ದಾರೆ.ಸುದ್ದಿ ತಿಳಿದ ಕೂಡಲೆ ಶಾಸಕ ಎಚ್.ಸಿ. ಬಾಲಕೃಷ್ಣ ಆಸ್ಪತ್ರೆಗೆ ಭೇಟಿ ಮಕ್ಕಳ ಆರೋಗ್ಯ ವಿಚಾರಿಸಿಕೊಂಡರು. ಸೂಕ್ತ ಚಿಕಿತ್ಸೆ ನೀಡುವಂತೆ ಇದೇ ವೇಳೆ ವೈದ್ಯರಿಗೆ ಸೂಚಿಸಿದರು.