ಬೆಂಗಳೂರು: ಹೊರವಲಯದ ಮಾಗಡಿ ರಸ್ತೆ ಮಹದೇಶ್ವರ ನಗರದಲ್ಲಿ ರೌಡಿಶೀಟರ್ ಚೇತನ್ಕುಮಾರ್ ಅಲಿಯಾಸ್ ಚೇತು (30) ಎಂಬಾತನನ್ನು ದುಷ್ಕರ್ಮಿಗಳು ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.
ರಾಜಗೋಪಾಲನಗರ ನಿವಾಸಿ ರಾಜಗೋಪಾಲನಗರ ಪೊಲೀಸ್ ಠಾಣೆ ರೌಡಿ ಶೀಟರ್ ಆಗಿರುವ ಚೇತನ್ ಭಾನುವಾರ ಮಧ್ಯಾಹ್ನ ಸ್ನೇಹಿತ ಶಶಿ ಎಂಬಾತನೊಂದಿಗೆ ಮಹದೇಶ್ವರ ನಗರದ ಸಮೀಪದ ಸಂಬಂಧಿಕರೊಬ್ಬರ ಮನೆಗೆ ಬಂದಿದ್ದ. 2.30ರ ಸುಮಾರಿಗೆ ಮಳೆ ಬರುತ್ತಿದ್ದ ಕಾರಣ ಇಬ್ಬರು ಮಾಂಸದ ಅಂಗಡಿ ಮುಂದೆ ಕುಳಿತಿದ್ದರು. ಈ ವೇಳೆ ಬೈಕ್ನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ದಾಳಿ ನಡೆಸಲು ಮುಂದಾಗಿದ್ದಾರೆ. ಅಪಾಯ ಅರಿತ ಇಬ್ಬರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಈ ವೇಳೆ ಶಶಿ ತಪ್ಪಿಸಿಕೊಳ್ಳಲು ಯಶಸ್ವಿಯಾಗಿದ್ದಾನೆ. ಆದರೆ, ಚೇತನ್ನನ್ನು ದುಷ್ಕರ್ಮಿಗಳು ಅಟ್ಟಿಸಿಕೊಂಡು ಹೋಗಿದ್ದಾರೆ. ಆಗ ಗೇಟ್ ತೆಗೆದಿದ್ದ ಮನೆಯೊಂದಕ್ಕೆ ನುಗ್ಗಿದ ಚೇತನ್ ಮನೆಯೊಳಗೆ ಸೇರಲು ಯತ್ನಿಸಿದ್ದಾನೆ. ಆದರೆ, ಮಳೆ ಬರುತ್ತಿದ್ದ ಕಾರಣ ಎರಡು ಮನೆಗಳ ಬಾಗಿಲು ಹಾಕಲಾಗಿತ್ತು. ಅಲ್ಲದೇ ಚೇತನ್ ಹೋಗಿದ್ದ ಕಾಂಪೌಂಡ್ನಿಂದ ಮುಂದಕ್ಕೆ ಡೆಡ್ ಎಂಡ್ ಇತ್ತು. ಮನೆಗಳ ಬಾಗಿಲು ತೆಗೆಯಲು ಯತ್ನಿಸಿದರು ಸಾಧ್ಯವಾಗಿಲ್ಲ. ಹೀಗಾಗಿ ಸಿಕ್ಕಿ ಬಿದ್ದ ಚೇತನ್ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಿಗ್ಗಾ ಮುಗ್ಗಾ ಕೊಚ್ಚಿ ಕೊಲೆಗೈದು ಸ್ಥಳದಿಂದ ಪರಾರಿಯಾಗಿದ್ದಾರೆ. ಹಾಡ ಹಗಲೇ ರೌಡಿಗಳ ದುಷ್ಕೃತ್ಯ ನೋಡಿದ ಮಹದೇಶ್ವರ ನಗರದ ಜನತೆ ಬೆಚ್ಚಿ ಬಿದ್ದಿದ್ದಾರೆ.
ಮಾಹಿತಿ ಪಡೆದ ತಾವರೆಕೆರೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರು. ಶವವನ್ನು ವಿಕ್ಟೋರಿಯಾ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿದ್ದಾರೆ.
ಚೇತನ್ ಜತೆ ಇದ್ದು ತಪ್ಪಿಸಿಕೊಂಡಿರುವ ಶಶಿ ಪತ್ತೆಯಾದರೆ ಹಂತಕರ ಮಾಹಿತಿ ಸಿಗುತ್ತದೆ. ಹೀಗಾಗಿ ಶಶಿಯನ್ನು ಹುಡುಕುತ್ತಿದ್ದೇವೆ ಎಂದು ತಾವರೆಕೆರೆ ಪೊಲೀಸರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ರಾಮನಗರ ಎಸ್ಪಿ ಅನುಪಮ್ ಅಗರ್ವಾಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಒಳ್ಳೆಯವನಾಗುವೆ ಎಂದಿದ್ದ!
ಸಣ್ಣ ಪುಟ್ಟ ಫೈನಾನ್ಸ್ ವ್ಯವಹಾರ ಮಾಡುತ್ತಿದ್ದ ಚೇತನ್ ಭಾನುವಾರ ಬೆಳಗ್ಗೆ ರಾಜಗೋಪಾಲ ನಗರ ಪೊಲೀಸ್ ಠಾಣೆಗೆ ಹೋಗಿ ಸಹಿ ಮಾಡಿದ್ದ. ತಾನು ಎಲ್ಲಾ ಚಟುವಟಿಕೆಗಳನ್ನು ಬಿಟ್ಟಿದ್ದು ಕಳೆದ ಎರಡು ವರ್ಷಗಳಿಂದ ಯಾವುದೇ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿಲ್ಲ. ಮನೆಯಲ್ಲಿ ಹೆಣ್ಣು ನೋಡುತ್ತಿದ್ದಾರೆ. ಹೀಗಾಗಿ ಶೀಘ್ರದಲ್ಲೇ ಮದುವೆ ಆಗುತ್ತೇನೆ. ಮುಂದೆ ಒಳ್ಳೆಯವನಾಗಿ ಬದುಕುತ್ತೇನೆ ಎಂದು ಹೇಳಿದ್ದ ಎಂದು ರಾಜಗೋಪಾಲನಗರ ಪೊಲೀಸರು ತಿಳಿಸಿದ್ದಾರೆ.
ಐದು ಪ್ರಕರಣಗಳು
2009ರಲ್ಲಿ ಭದ್ರ ಎಂಬುವರ ಕೊಲೆ ಪ್ರಕರಣ, ನಂತರ ಇತರ ಹಲ್ಲೆ, ಅಪಹರಣ ಹಾಗೂ 2012ರಲ್ಲಿ ನರಸಿಂಹ ಎಂಬುವರ ಕೊಲೆ ಯತ್ನ ಪ್ರಕರಣದಲ್ಲಿ ಚೇತನ್ ಭಾಗಿಯಾಗಿದ್ದಾನೆ. ಈತನ ವಿರುದ್ಧ 2010ರಲ್ಲಿ ರಾಜಗೋಪಾಲನಗರ ಠಾಣೆ ರೌಡಿ ಶೀಟ್ ತೆರೆಯಲಾಗಿತ್ತು.