-ದೇಶಾದ್ರಿ ಹೊಸ್ಮನೆ
ಬೆಂಗಳೂರು: ಈ ತನಕವೂ ಕಾಡಿದ ಮುಂಗಾರು ಕೊರತೆ ರಾಜ್ಯದ ಬಹುತೇಕ ಭಾಗದಲ್ಲಿ ರೈತರಿಗೆ ಬೇಸರ ತರಿಸಿದೆ. ಆದರೆ ರಾಜ್ಯದ ಕಾಫಿ ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಕಾರಣ, ಮಳೆ ಕೊರತೆಯ ನಡುವೆಯೂ ಕಾಫಿ ಬೆಳೆ ಹುಲುಸಾಗಿ ಬಂದಿದ್ದು, ಭವಿಷ್ಯದತ್ತ ಭರವಸೆ ತೋರಿದೆ.
ಕಾಫಿ ಮಂಡಳಿ ಅಂದಾಜಿನ ಪ್ರಕಾರ ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಈ ಬಾರಿ 2,48,300 ಟನ್ ಕಾಫಿ ಉತ್ಪಾದನೆಯ ನಿರೀಕ್ಷೆಯಿದೆ. 2013-14 ರ ಸಾಲಿಗೆ ಹೋಲಿಸಿದರೆ, ಈ ಬಾರಿ ಉತ್ಪಾದನೆಯಲ್ಲಿ 37,200 ಟನ್ ಹೆಚ್ಚುವರಿಯಾಗುವ ಸಾಧ್ಯತೆಯಿದೆ.
ಸಾಮಾನ್ಯವಾಗಿ ಕಾಫಿ ಮಂಡಳಿ ವರ್ಷಕ್ಕೆ ಎರಡು ಬಾರಿ ಬೆಳೆ ಉತ್ಪಾದನೆಯ ಪ್ರಮಾಣವನ್ನು ಆಂದಾಜಿಸುತ್ತದೆ. ಕೊಯ್ಲಿನ ನಂತರ ಕಾಫಿ ಹೂವಾಗಿ ಕಾಯಿ ಹಿಡಿಯುವ ಕಾಲಘಟ್ಟವಾದ ಮೇ-ಜೂನ್ ಹಾಗೂ ಬೆಳೆ ಕೊಯ್ಲಿಗೆ ಬರುವ ನವೆಂಬರ್-ಡಿಸೆಂಬರ್ ತಿಂಗಳಲ್ಲಿ ತನ್ನ ವಾರ್ಷಿಕ ವಹಿವಾಟು ನಿರ್ಧರಿಸಲು ಉತ್ಪಾದನೆ ಪ್ರಮಾಣವನ್ನು ಅಂದಾಜಿಸುತ್ತಾ ಬರುವುದು ವಾಡಿಕೆ.
ಅಂತೆಯೇ ಈ ಬಾರಿಯೂ ಕಾಫಿ ಮಂಡಳಿಯು ಇತ್ತೀಚಿಗಷ್ಟೇ ಮೇ-ಜೂನ್ ಹೊತ್ತಿನ ಬೆಳೆ ಉತ್ಪಾದನೆಯ ಅಂದಾಜು ವಿವರ ಪ್ರಕಟಿಸಿದ್ದು, 2014-15 ಸಾಲಿಗೆ ಕರ್ನಾಟಕದಲ್ಲಿ 2,48,300 ಟನ್ ಕಾಫಿ ಉತ್ಪಾದನೆಯಾಗುವ ಸಾಧ್ಯತೆಯಿದೆ ಎಂದು ಹೇಳಿದೆ. ಈ ಪೈಕಿ, ಅರಬಿಕ್ 80,700 ಹಾಗೂ ರೊಬೂಸ್ಟಾ 1,67,600 ಟನ್ ಉತ್ಪಾದನೆಯಾಗಲಿದೆ ಎಂಬುದಾಗಿಯೂ ಅಂದಾಜಿಸಿದೆ. ಕಳೆದ ವರ್ಷ ಅರಬಿಕ್ 78,440 ಹಾಗೂ ರೊಬೂಸ್ಟಾ 1,32,660 ಟನ್ ಉತ್ಪಾದನೆ ಆಗಿತ್ತು.
ಕರ್ನಾಟಕ ಮಾತ್ರವಲ್ಲದೆ, ಕಾಫಿ ಬೆಳೆಯುವ ರಾಜ್ಯಗಳಾದ ಕೇರಳ, ತಮಿಳುನಾಡುಗಳಲ್ಲೂ ಬೆಳೆ ಉತ್ಪಾದನೆಯ ಪ್ರಮಾಣವನ್ನು ಕಾಫಿ ಮಂಡಳಿ ಅಂದಾಜಿಸಿದೆ. ಕೇರಳದಲ್ಲಿ 68,875 ಟನ್ ಹಾಗೂ ತಮಿಳುನಾಡಿನಲ್ಲಿ 17,875 ಟನ್ ಬೆಳೆ ಉತ್ಪಾದನೆಯಾಗುವ ಸಾಧ್ಯತೆಯಿದೆ ಎಂದು ಹೇಳಿದೆ.
ಉಳಿದಂತೆ ಅಸಾಂಪ್ರದಾಯಿಕವಾಗಿ ಬೆಳೆಯುವ ಆಂಧ್ರಪ್ರದೇಶ, ಒಡಿಶಾ ಹಾಗೂ ಈಶಾನ್ಯ ರಾಜ್ಯಗಳಿಂದ ಒಟ್ಟು 9700 ಟನ್ ಉತ್ಪಾದನೆಯೂ ಸೇರಿದಂತೆ 2014-15 ಸಾಲಿಗೆ ದೇಶದಲ್ಲಿ 3,44, 750 ಮೆಟ್ರಿಕ್ ಟನ್ ಕಾಫಿ ಉತ್ಪಾದನೆ ಆಗುವ ಸಾಧ್ಯತೆಯಿದೆ ಎಂದು ಮಂಡಳಿ ತನ್ನ ಮೊದಲ ಹಂಗಾಮಿನ ಲೆಕ್ಕಾಚಾರಗಳಲ್ಲಿ ಅಂದಾಜಿಸಿದೆ.
ಕರ್ನಾಟಕದ ಮಟ್ಟಿಗೆ ಕೊಡಗು, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳು ಕಾಫಿ ಬೆಳೆಗೆ ಪ್ರಸಿದ್ಧಿ ಪಡೆದಿವೆ. ಸದ್ಯ ಈ ಭಾಗದಲ್ಲಿನ ಕಾಫಿ ತೋಟಗಳಲ್ಲಿ ಭರ್ಜರಿ ಕಾಯಿ ಕಾಣುತ್ತಿದೆ. ಇದರಿಂದ ಮುಂದೆ ಭರ್ಜರಿ ಫಸಲು ಸಿಗುವ ನಿರೀಕ್ಷೆ ಕಾಫಿ ಬೆಳೆಗಾರರದ್ದು. ಆದರೆ, ಮಳೆ ಕೊರತೆಯಿಂದ ಬೆಳೆ ಹಾನಿಯಾಗುವ ಆತಂಕವೂ ಇದೆ. ಈಗಾಗಲೇ ಮಳೆ ಕೊರತೆಯಿಂದ ಅಲ್ಲಲ್ಲಿ ಕಾಫಿ ಗಿಡಗಳಿಗೆ ರೋಗ ಕಾಣಿಸಿಕೊಂಡಿದೆ. ಕಾಯಿಗಳ ಮೇಲೆ ಹುಳ ಕಾಣಿಸಿಕೊಂಡಿವೆ. ಮುಂದಾದರೂ ಮಳೆ ಸಕಾಲಿಕವಾಗಿ ಸುರಿದರೆ, ಕಾಫಿ ಮಂಡಳಿ ನಿರೀಕ್ಷೆಯಂತೆ ಬಂಪರ್ ಬೆಳೆ ಸಿಗುವುದು ಖಚಿತವಿದೆ ಎನ್ನುತ್ತಾರೆ ಸಕಲೇಶಪುರದ ಕಾಫಿ ಬೆಳೆಗಾರ ಚಂದ್ರಶೇಖರ್.
ಸದ್ಯಕ್ಕೆ ಬೆಳೆ ಚೆನ್ನಾಗಿಯೇ ಬಂದಿದೆ. ಕಾಯಿ ಹಿಡಿದಿರುವುದನ್ನ ನೋಡಿದರೆ, ಭರ್ಜರಿ ಫಸಲು ಸಿಗುವ ನಿರೀಕ್ಷೆ ಇದೆ. ಆದರೆ ಮಳೆ ಪರಿಸ್ಥಿತಿ ಹೇಗಿದೆಯೋ ಗೊತ್ತಿಲ್ಲ. ಮಳೆ ಮೇಲೆ ಬೆಳೆ ನಿಂತಿದೆ.
- ದಿನೇಶ್, ಕಾಫಿ ಬೆಳೆಗಾರ, ಬೇಲೂರು
ಜಿಲ್ಲಾವಾರು ಉತ್ಪಾದನೆಯ ನಿರೀಕ್ಷಿತ ಅಂದಾಜು (ಟನ್ಗಳಲ್ಲಿ)
ಜಿಲ್ಲೆ ಅರಬಿಕ್ ರೊಬೂಸ್ಟಾ ಒಟ್ಟು
ಚಿಕ್ಕಮಗಳೂರು 41,170 40,000 81,170
ಕೊಡಗು 20,150 1,13,000 1,33,150
ಹಾಸನ 19380 14,600 33,980
ಒಟ್ಟು 80,700 1,67,600 2,48,300