ಲಾಲ್ಬಾಗ್ನಲ್ಲಿ 1912 ಕ್ಕಿಂತಲೂ ಮೊದಲು ವರ್ಷಕ್ಕೆ ಕೆಲವೇ ಬಾರಿ ಇಂತಹ ಪ್ರದರ್ಶನ ನಡೆಯುತ್ತಿತ್ತು. ಅದಾದ ನಂತರ 1912 ರಲ್ಲಿ ಮೈಸೂರು ಉದ್ಯಾನಕಲಾ ಸೊಸೈಟಿಯನ್ನು ಆಯೋಜಿಸಲಾಯಿತು. ಅಂದಿನಿಂದ ಪ್ರದರ್ಶನವನ್ನು ಅಧಿಕೃತವಾಗಿ ಆರಂಭಿಸಲಾಯಿತು. ಅಂದಿನಿಂದ ಲಾಲ್ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ಹೆಸರುವಾಸಿಯಾಗಿದೆ. ಆದರೂ ಈ ಮಧ್ಯೆ ಪ್ರತಿ ವರ್ಷ ಪ್ರದರ್ಶನ ನಡೆಯಲಿಲ್ಲ. ನಂತರ ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವದ ಸಂದರ್ಭದಲ್ಲಿ ಏರ್ಪಡಿಸಲಾಗುತ್ತಿತ್ತು. ಹೀಗಾಗಿ 100ವರ್ಷಗಳಾಗಿವೆ. ವರ್ಷಕ್ಕೆ ಎರಡರಂತೆ ಪ್ರದರ್ಶನಗೊಳ್ಳುತ್ತಾ ಈಗ 200ರ ಪ್ರದರ್ಶನ.
- ನಯನಾ ಬಿ.ಜೆ.
ಬೆಂಗಳೂರು: ಲಾಲ್ಬಾಗ್ನ ಫಲಪುಷ್ಪ ಪ್ರದರ್ಶನಕ್ಕೆ ಇನ್ನೂರರ ಸಂಭ್ರಮ. ಇನ್ನೂ ಕೆಲವೇ ದಿನಗಳಲ್ಲಿ ಲಾಲ್ಬಾಗ್ ಸುಂದರವಾದ ಹೂವುಗಳಿಂದ ಕಂಗೊಳಿಸುತ್ತದೆ.
ಹೀಗಾಗಿ ಈ ಸಂಭ್ರಮವನ್ನು ಆಚರಿಸಲು ಉದ್ಯಾನ ಕಾರ್ಯದಲ್ಲಿ ನಿರತವಾಗಿದೆ. ಮೈಸೂರು ಅರಮನೆ ಅಥವಾ ಶಿವಪುರದ ಸತ್ಯಾಗ್ರಹ ಸೌಧದ ವಿಶೇಷ ಆಕರ್ಷಣೆಯೊಂದಿಗೆ ಐತಿಹಾಸಿಕ ಪ್ರದರ್ಶನವಾಗಿ ರೂಪುಗೊಳ್ಳಲು ಉದ್ಯಾನದಲ್ಲಿ ಭರದಿಂದ ಸಿದ್ಧತೆ ಸಾಗಿದೆ.
ಜನರನ್ನು ನಿಬ್ಬೆರಗಾಗಿಸುವ ಕಾರ್ಯ ವರ್ಷಪೂರ್ತಿ ನಡೆಯುತ್ತಿದ್ದು ಈ ಬಾರಿ ಸ್ವಲ್ಪ ವಿಭಿನ್ನ ರೀತಿಯಲ್ಲಿ ಮೂಡಿಬರಲಿದೆ. ಆಗಸ್ಟ್ 8ರಿಂದ 15ರವರೆಗೆ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ ನಡೆಸಲು ದಿನಾಂಕ ನಿಗದಿಯಾಗಿದೆ. ಹಾಗೂ ಇದು 200ನೇ ಪ್ರದರ್ಶನವಾಗಿರುವುದರಿಂದ ದಾಖಲಾರ್ಹ ರೀತಿಯಲ್ಲಿ ಇದನ್ನು ಪ್ರದರ್ಶಿಸಲು ತೋಟಗಾರಿಕಾ ಇಲಾಖೆ ಸಜ್ಜಾಗಿದೆ.
ಪ್ರಪ್ರಥಮ ಬಾರಿಗೆ ಲಾಲ್ಬಾಗ್ ಹಾಗೂ ತೋಟಗಾರಿಕಾ ಇಲಾಖೆಗೆ ಮರೆಯಲಾಗದಂತಹ ಕೊಡುಗೆ ನೀಡಿದ ರಾವ್ ಬಹದ್ದೂರ್, ಜಾನ್ ಕೆಮರಾನ್ ಸೇರಿದಂತೆ 10ಮಂದಿ ನಿರ್ದೇಶಕರ ಕೊಡುಗೆ ಸಾಧನೆಗಳ ಬಗ್ಗೆ ಧ್ವನಿ ಪ್ರಸಾರ ಕಾರ್ಯಕ್ರಮ ಕೂಡ ಏರ್ಪಡಿಸಲಾಗಿದೆ.
ಪ್ರದರ್ಶನವನ್ನು ಅತ್ಯಂತ ಸುಂದರವಾಗಿ ಮೂಡಿಬರಲು ಏಪ್ರಿಲ್ನಿಂದಲೇ ಅಲಂಕಾರಿಕ ಹೂವಿನ ಬೀಜಗಳನ್ನು ಬಿತ್ತನೆ ಮಾಡಲಾಗುತ್ತಿದೆ. ಹೂವಿನ ಕುಂಡಗಳಲ್ಲಿ ಮಣ್ಣನ್ನು ಸೇರಿಸುವುದು, ಗೊಬ್ಬರಹಾಕಿ ಸಸಿಗಳನ್ನು ನೆಡುವುದು ಮತ್ತು ಬೀಜಗಳನ್ನು ಹಾಕುವುದು. ಉದ್ಯಾನದ ದ್ವಾರಗಳು, ಹಾಗೂ ಮುಖ್ಯ ತಾಣಗಳ ಅಲಂಕಾರಿಕ ಗಿಡಗಳನ್ನು ಸುಂದರವಾಗಿ ಕಾಣುವ ರೀತಿಯಲ್ಲಿ ಕತ್ತರಿಸಿ ಟ್ರಿಮ್ ಮಾಡುವುದು. ಹುಲ್ಲು ಹಾಸು ಬಾಡದಂತೆ ನೀರನ್ನು ಸಿಂಪಡಿಸುವುದು, ನರ್ಸರಿಗಳಿಂದ ಗಿಡಗಳನ್ನು ತಂದು ಆರೈಕೆ ಮಾಡುವ ಕೆಲಸ ನಡೆಯುತ್ತಿದೆ.
120 ಮಂದಿಯ ಶ್ರಮ: ಇದಕ್ಕಾಗಿ 70 ಮಂದಿ ಗಾರ್ಡ್ಗಳು, 15 ಮಂದಿ ಗುತ್ತಿಗೆ ಆಧಾರಿತ ನೌಕರರು, 30 ತರಬೇತಿ ಕೇಂದ್ರದ ಸಿಬ್ಬಂದಿಗಳು ಸೇರಿದಂತೆ ಸುಮಾರು 120 ಕೈಗಳು ಕೆಲಸ ಮಾಡುತ್ತಿದೆ.
ಜಿಂಕೆ ನರ್ಸರಿಯಲ್ಲಿ ಏಪ್ರಿಲ್ನಿಂದಲೇ ಸಸಿಗಳನ್ನು ಬೆಳೆಸಲಾಗುತ್ತಿದೆ. ಅನೇಕ ರೀತಿಯ ತರಕಾರಿ, ಹೂವುಗಳನ್ನು ಪ್ರದರ್ಶಿಸುವ ಸಲುವಾಗಿ 20 ಸಾವಿರ ಕುಂಡಗಳನ್ನು ಸಿದ್ಧಪಡಿಸಲಾಗುತ್ತಿದೆ. ಪ್ರದರ್ಶನದಲ್ಲಿ ಆಂಥೇರಿಯಮ್, ಜರ್ಬೆರಾ, ಆರ್ಕಿಡ್ ಹಾಗೂ ಅನೇಕ ರೀತಿಯ ಹೂವುಗಳು ಜನರ ಕಣ್ಮನ ಸೆಳೆಯಲಿವೆ. ಕುಂಡಗಳಲ್ಲಿ ಅರಳಿದ ದೇಶ ವಿದೇಶಗಳ ಹೂವುಗಳು ಪ್ರದರ್ಶನಗೊಳ್ಳಲಿವೆ. ಇಕೆಬಾನ ಹಾಗೂ ತರಕಾರಿ ಕೆತ್ತನೆ ಪ್ರದರ್ಶನ, ನಾನಾ ಹೂವಿನ ಜೋಡಣೆಗಳ ಪ್ರದರ್ಶನ ನಡೆಯಲಿದೆ.