ಬೆಂಗಳೂರು: ರಾಷ್ಟ್ರ ಮತ್ತು ಪ್ರಾದೇಶಿಕವಾಗಿ ಅವಿನಾಭಾವ ಸಂಬಂಧ ಬೆಸೆಯುವ ಭಾಷೆಯನ್ನು ಎಂದೂ ಹೋರಾಟದ ಸಂಕೇತವಾಗಿ ಅಭಿವ್ಯಕ್ತಿಗೊಳಿಸಬಾರದು ಎಂದು ಮಾಜಿ ಸಚಿವೆ ರಾಣಿ ಸತೀಶ್ ಅಭಿಪ್ರಾಯಪಟ್ಟರು. ಮಂಗಳವಾರ ಗುರು ಶಿಕ್ಷಣ ಮಂಡಳಿಯ ಸುವರ್ಣ ಮಹೋತ್ಸವದಲ್ಲಿ ಅವರು ಮಾತನಾಡಿದರು.
ಭಾಷೆ ನಮ್ಮ ಭಾವನೆ ಹಂಚಿಕೊಳ್ಳವ ಸೇತುವೆ. ಮಾತೃಭಾಷೆ ಮೂಲಕ ಭಾವನೆಗಳನ್ನು ವ್ಯಕ್ತಪಡಿಸುತ್ತೇವೆ. 36 ಕೋಟಿ ಜನ ಪ್ರಥಮ ಭಾಷೆಯಾಗಿ ಹಿಂದಿ ಕಲಿಯುತ್ತಿದ್ದಾರೆ. ಹಿಂದಿಯ ನಂತರ ಚೈನಿ ಭಾಷೆ ಪ್ರಬಲ ಭಾಷೆಯಾಗಿದೆ ಎಂದರು.
ಸಂಸ್ಥೆ ಬಗ್ಗೆ ಶ್ಲಾಘನೆ: ನಾನೂ ಇದೇ ಸಂಸ್ಥೆಯಲ್ಲಿ ಹಿಂದಿ ಪ್ರಥಮ ಕಟ್ಟಿ ಪಾಸು ಮಾಡಿದ್ದೆ ಎಂದ ಅವರು, ಸಂಸ್ಥೆ ಹಿಂದಿ ರಾಜ ಭಾಷೆ ಎಂಬ ಧ್ಯೇಯದಿಂದ ಕಲಿಸುತ್ತಿದೆ. ಸಂಸ್ಥೆಯ ಮುಖ್ಯಸ್ಥ ಎ.ಕೆ. ಗುರುರಾಜಾರಾವ್ ಮತ್ತು ಎಂ. ಪ್ರಫುಲ್ಲ ದಂಪತಿ ದೇಹದಾನ ಮಾಡಿ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದಾರೆ ಎಂದರು.
ಪ್ರಚಲಿತ ಭಾಷೆ: ಶಾಸಕ ಎಂ. ಕೃಷ್ಣಪ್ಪ ಮಾತನಾಡಿ, ಭಾಷೆ ಸಂವಹನದ ಮಾಧ್ಯಮ. ಸಂಸ್ಕೃತದಿಂದ ಭಾರತೀಯ ಭಾಷೆಗಳು ಬೆಳೆದಿವೆ. ನಾನು ಹಿಂದಿಯಲ್ಲಿ ಪ್ರಥಮ, ಮಧ್ಯಮದಲ್ಲಿ ಉತ್ತೀರ್ಣನಾಗಿದ್ದೇನೆ. ಭಾರತದಲ್ಲಿ ಎಲ್ಲೆಡೆ ಹಿಂದಿ ಪ್ರಚಲಿತ ಭಾಷೆ ಎಂದರು. ಕೃಷ್ಣಪ್ಪ ಮಕ್ಕಳಿಗೆ ಪ್ರಮಾಣಪತ್ರ ಮತ್ತು ರಾಣಿ ಸತೀಶ್ ಪದಕ ವಿತರಿಸಿದರು. ಬೆಂಗಳೂರು ವಿಶ್ವವಿದ್ಯಾಲಯದ ಡಾ. ಪ್ರಭಾಶಂಕರ ಪ್ರೇಮಿ, ಡಾ. ಮಹದೇವ ಹಳ್ಳಿಕೇರಿ, ಡಾ. ಆರತಿ ಬಾಲಸುಬ್ರಹ್ಮಣ್ಯಮ್ ಉಪಸ್ಥಿತರಿದ್ದರು.