ಕೆರೆ ಮಂಜುನಾಥ್
ಬೆಂಗಳೂರು: ಅಧಿಕಾರಿಗಳು ಆಸಕ್ತಿ ವಹಿಸಿದ್ದರೆ, ನಮಗೆ ಸಹಕಾರ ನೀಡಿದ್ದರೆ ಕಸದ ಸಮಸ್ಯೆಯನ್ನು ಒಂದು ವರ್ಷದಲ್ಲೇ ಬಗೆಹರಿಸಬಹುದಿತ್ತು. ಆದರೆ, ಅಧಿಕಾರಿಗಳು ಏನನ್ನೂ ಮಾಡಲು ಬಿಡುವುದಿಲ್ಲ. ನಮ್ಮೊಂದಿಗೆ ಅಧಿಕಾರಿಗಳೂ ಸ್ಪಂದಿಸಿದ್ದರೆ ಇಂದು ಈ ಎಲ್ಲ ಪ್ರಾಬ್ಲಮ್ಮೇ ಇರುತ್ತಿರಲಿಲ್ಲ.
ಬಿಬಿಎಂಪಿ ಪ್ರಥಮ ಮಹಿಳಾ ಮೇಯರ್ ಶಾರದಮ್ಮ ಅವರ ಖಡಕ್ ನುಡಿಗಳಿವು. ಬೆಂಗಳೂರಿನಲ್ಲಿ ಉಂಟಾಗಿರುವ ಕಸದ ಸಮಸ್ಯೆ ಬಗ್ಗೆ ಶಾರದಮ್ಮ ಅವರೊಂದಿಗೆ 'ಕನ್ನಡಪ್ರಭ' ಮಾತುಕತೆ ನಡೆಸಿತು. ಈ ಸಂದರ್ಭದಲ್ಲಿ ಅವರು ತಮ್ಮ ಅವಧಿಯಲ್ಲಿ ಕಸದ ಇಂತಹ ಸಮಸ್ಯೆ ಎದುರಾಗಲಿಲ್ಲ. ಆದರೂ ಅಧಿಕಾರಿಗಳು ಸಹಕಾರ ನೀಡಿದ್ದರೆ ನಾವು ನೋಡಿಕೊಂಡು ಬಂದಿದ್ದ ಯೋಜನೆಗಳನ್ನು ಇಲ್ಲಿ ಅನುಷ್ಠಾನಗೊಳಿಸಬಹುದಿತ್ತು. ಕಸ ಎಲ್ಲ ಸಂಸ್ಕರಣೆಯಾಗುತ್ತಿತ್ತು ಎಂದರು. ಅವರ ಮಾತು ಹೀಗಿದೆ-
ನಾನು ಮೇಯರ್ ಆಗಿದ್ದಾಗ ಕಸದ ಸಮಸ್ಯೆ ದೊಡ್ಡದಾಗಿ ಏನೂ ಬಂದಿರಲಿಲ್ಲ. ಸಣ್ಣಪುಟ್ಟ ಸಮಸ್ಯೆಗಳನ್ನು ಆಗಾಗಲೇ ಬಗೆಹರಿಸಲಾಗಿತ್ತು. ಆಯುಕ್ತ ಸಿದ್ದಯ್ಯ ಅವರು ಅಂದು ಎಲ್ಲ ನಿರ್ವಹಿಸಿದ್ದರು. ವಾರ್ಡ್‌ಗಳಲ್ಲೇ ಕಸವನ್ನು ವಿಂಗಡಿಸಿ, ಅಲ್ಲೇ ಸಂಸ್ಕರಿಸುವ 'ಶೂನ್ಯ ತ್ಯಾಜ್ಯ ವಾರ್ಡ್' ಯೋಜನೆ ಮಾಡಲಾಯಿತು. ಕೆಲವು ಕಾರ್ಪೊರೇಟರ್‌ಗಳು ಇದನ್ನು ಮಾಡಿದರಾದರೂ ಎಲ್ಲ ಕಡೆ ಇದು ಆಗಲಿಲ್ಲ. ನನ್ನ ಅವಧಿಯಲ್ಲಿ ನಾನು ಸಾಕಷ್ಟು ಇನ್ಸ್‌ಪೆಕ್ಷನ್ ಮಾಡಿದ್ದೇನೆ. ಬಹುತೇಕ ಪ್ರತಿಯೊಂದು ವಾರ್ಡ್‌ಗೂ ಹೋಗಿದ್ದೇನೆ. ಆಗ ಅಲ್ಲಿದ್ದ ಕಸದ ಸಮಸ್ಯೆ ನಿವಾರಿಸಲು ಅಧಿಕಾರಿಗಳಿಗೆ ಸೂಚಿಸಿದ್ದೆ. ಆಗಾಗ್ಗೆ ಅದನ್ನು ಪರಿಶೀಲಿಸಿದ್ದರಿಂದ ಸಮಸ್ಯೆ ಏನೂ ಆಗಲಿಲ್ಲ. ನನ್ನ ಅವಧಿಯಲ್ಲಿ ಮಂಡೂರಿನಲ್ಲಿ ಯಾವುದೇ ಸಮಸ್ಯೆ ಬರಲಿಲ್ಲ.
ಕಸ ಸಂಸ್ಕರಣೆಯ ಘಟಕ ನೋಡಿಕೊಂಡು ಬರಲು ನಾವು ಮುಂಬೈಗೆ ಹೋಗಿದ್ದೆವು. ಉಪಮೇಯರ್ ಸೇರಿಅಧಿಕಾರಿಗಳೆಲ್ಲ ಬಂದಿದ್ದರು. ಅಲ್ಲಿನ ವ್ಯವಸ್ಥೆ ಚೆನ್ನಾಗಿ ಇತ್ತು. ಅದನ್ನು ಇಲ್ಲಿ ಅಳವಡಿಸಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು. ಆದರೆ, ನೋಡಿಕೊಂಡು ಬಂದ ನಂತರ ಆ ಕೆಲಸವನ್ನು ಇಲ್ಲಿ ಮಾಡಲು ಅಧಿಕಾರಿಗಳು ಆಸಕ್ತಿ ತೋರಲೇ ಇಲ್ಲ. ಅಂತಹ ಘಟಕ ಇಲ್ಲಿ ಸ್ಥಾಪನೆ ಆಗಿದ್ದರೆ, ವಾಸನೆ ಬಾರದಂತೆ ತ್ಯಾಜ್ಯ ಸಂಸ್ಕರಣೆ ಆಗುತ್ತಿತ್ತು.
ಆದರೆ ಅಧಿಕಾರಿಗಳಿಗೆ ಆಸಕ್ತಿ ಇಲ್ಲ. ನಮಗೆ ಸಹಕಾರ ನೀಡಲಿಲ್ಲ. ಯೋಜನೆ ಮಾಡೋಣ ಎಂದಾಗ ಏನೇನೋ ಹೇಳಿ ದಾರಿ ತಪ್ಪಿಸಿದರು. ಅಷ್ಟರೊಳಗೆ ನಮ್ಮ ಅವಧಿ ಮುಗಿಯಿತು. ನಾನು ಆದ ಮೇಲೆ ಇಬ್ಬರು ಮೇಯರ್ ಬಂದರು. ಅವರ ಕಾಲದಲ್ಲೂ ಒಂದೇ ಒಂದು ಘಟಕ ಆಗಲಿಲ್ಲ. ಅಧಿಕಾರಿಗಳು ಕಸ ಸಂಸ್ಕರಣೆ, ವಿಲೇವಾರಿ ಬಗ್ಗೆ ಯಾವ ಕೆಲಸವನ್ನೂ ಸರಿಯಾಗಿ ಮಾಡುವುದಿಲ್ಲ. ನಮಗೆ ಕೇವಲ ಒಂದು ವರ್ಷದ ಅವಧಿ ಇರುವುದರಿಂದ ಎಲ್ಲವನ್ನೂ ಅದೇ ಸಮಯದಲ್ಲಿ ಮುಗಿಸಲೂ ಆಗುವುದಿಲ್ಲ.
ಈಗಲೂ ಎಲ್ಲರು ಸೇರಿಕೊಂಡು ಪರಿಹಾರ ಮಾಡಬೇಕು. ಮೇಯರ್, ಅಧಿಕಾರಿಗಳು ಒಂದಾಗಿ ಶೀಘ್ರ ಘಟಕ ಅನುಷ್ಠಾನ ಕಾರ್ಯ ಮಾಡಿದರೆ ಸಮಸ್ಯೆ ಬಗೆಹರಿಸಬಹುದು.