ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 13ನೇ ಘಟಿಕೋತ್ಸವ ಮೇ 3ರಂದು ಬೆಳಗ್ಗೆ 11 ಗಂಟೆಗೆ ವಿಟಿಯುನ ಸಭಾಭವನದಲ್ಲಿ ನಡೆಯಲಿದೆ ಎಂದು ವಿಟಿಯು ಕುಲಪತಿ ಡಾ.ಎಚ್.ಮಹೇಶಪ್ಪ ತಿಳಿಸಿದ್ದಾರೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಪಾಲರೂ ಆದ ವಿವಿ ಕುಲಾಧಿಪತಿ ಡಾ.ಹಂಸರಾಜ್ ಭಾರದ್ವಾಜ ಅಧ್ಯಕ್ಷತೆ ವಹಿಸಿ ಪದವಿ ಪ್ರದಾನ ಮಾಡುವರು. ಪ್ರಧಾನಮಂತ್ರಿ ಸಲಹೆಗಾರ ಪದ್ಮಭೂಷಣ ಡಾ. ಸ್ಯಾಮ್ ಪಿಟ್ರೋಡ್ ಘಟಿಕೋತ್ಸವ ಭಾಷಣ ಮಾಡುವರು. ಉನ್ನತ ಶಿಕ್ಷಣ ಹಾಗೂ ಪ್ರವಾಸೋದ್ಯಮ ಸಚಿವ ಆರ್.ವಿ. ದೇಶಪಾಂಡೆ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಗೌರವ ಡಾಕ್ಟರೇಟ್ ಪದವಿ ಪ್ರದಾನ: ಇದೇ ವೇಳೆ ಸ್ಯಾಮ್ ಪಿಟ್ರೋಡ್, ನವದೆಹಲಿಯ ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಅಧ್ಯಕ್ಷ ಪ್ರೊ.ವೇದ ಪ್ರಕಾಶ, ಕೇಂದ್ರ ಸರ್ಕಾರದ ತಂತ್ರಜ್ಞಾನ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಎಚ್.ಕೆ. ಮಿತ್ತಲ್ ಹಾಗೂ ಬೆಂಗಳೂರಿನ ಉದ್ಯಮಿ, ಕಿರ್ಲೋಸ್ಕರ್ ಸಿಸ್ಟಿಮ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ವಿಕ್ರಮ್ ಕಿರ್ಲೋಸ್ಕರ್ ಅವರಿಗೆ ಡಾಕ್ಟರ್ ಆಫ್ ಸೈನ್ಸ್ ಗೌರವ ಪದವಿ ಪ್ರದಾನ ಮಾಡಲಾಗುವುದು ಎಂದು ಹೇಳಿದರು.
ಘಟಿಕೋತ್ಸವದಲ್ಲಿ 47586 ಬಿಇ ಪದವಿಗಳನ್ನು 102 ಬಿಆಕ್ ಪದವಿಗಳನ್ನು, 5217 ಎಂಬಿಎ ಪದವಿಗಳನ್ನು, 2647 ಎಂಸಿಎ ಪದವಿಗಳನ್ನು, 4572 ಎಂಟೆಕ್ ಪದವಿ, 11 ಎಂಆರ್ಕ್ ಪದವಿಗಳನ್ನು, 124 ಪಿಎಚ್ಡಿ ಪದವಿ ಹಾಗೂ 22 ಎಂಎಸ್ಸಿ (ಎಂಜಿನಿಯರಿಂಗ್) ಪದವಿ ನೀಡಲಾಗುತ್ತದೆ ಎಂದರು.
ವಿಟಿಯು ದೇಶದ ಪ್ರತಿಷ್ಠಿತ ಹಾಗೂ ಅತೀ ದೊಡ್ಡ ತಾಂತ್ರಿಕ ವಿಶ್ವವಿದ್ಯಾಲಯವಾಗಿದ್ದು, 203 ಸಂಯೋಜಿತ ತಾಂತ್ರಿಕ ಮಹಾವಿದ್ಯಾಲಯ ಹೊಂದಿದೆ. 34 ಪದವಿ ಕೋರ್ಸ್ಗಳು ಹಾಗೂ 62 ಸ್ನಾತಕೋತ್ತರ ಪದವಿ ಕೋರ್ಸ್ಗಳಲ್ಲಿ 3.5 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ತಾಂತ್ರಿತ ಶಿಕ್ಷಣ ನೀಡಲಾಗುತ್ತಿದೆ. ವಿವಿಧ ತಾಂತ್ರಿಕ ಮಹಾವಿದ್ಯಾಲಯಗಳ 592 ವಿಭಾಗಗಳನ್ನು ಸಂಶೋಧನಾ ಕೇಂದ್ರಗಳೆಂದು ಮಾನ್ಯತೆ ನೀಡಲಾಗಿದೆ ಎಂದರು.
ಜಾಗತಿಕ ಮಟ್ಟದಲ್ಲಿ ವಿಟಿಯುವನ್ನು ಗುರುತಿಸಿಕೊಳ್ಳಲು ಹಲವಾರು ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ. ಎಂಜಿನಿಯರಿಂಗ್ ಅಧ್ಯಾಪಕರಿಗೆ ವೃತ್ತಿ ಕೌಶಲ್ಯಾಭಿವೃದ್ಧಿ ತರಬೇತಿ ನಡೆಸಲು ಎನ್ಬಿಎ ನೋಡಲ್ ಕೇಂದ್ರ, ಜೈವಿಕ ಇಂಧನ ಮಾಹಿತಿ ಮತ್ತು ಪ್ರಾತ್ಯಕ್ಷಿಕ ಕೇಂದ್ರ, ನ್ಯಾನೋ ತಂತ್ರಜ್ಞಾನ ಸಂಶೋಧನಾ ಕೇಂದ್ರ ಸ್ಥಾಪಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ಅಕಾಡೆಮಿ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳು ಎಂಟೆಕ್ ಮತ್ತು ಪಿಎಚ್ಡಿ ಪದವಿ ಜೊತೆಯಾಗಿ ಪೂರೈಸುವಂತೆ ಸಮಗ್ರ ಕೋರ್ಸ್ ಪ್ರಾರಂಭಿಸಲಾಗಿದೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ರು. 1 ಕೋಟಿ ಧನಸಹಾಯದೊಂದಿಗೆ ಬೆಳಗಾವಿಯಲ್ಲಿ ಪರಿಸರ ಛೇರ್ ಸ್ಥಾಪಿಸಲಾಗಿದೆ. ಸಂಯೋಜಿತ ಎಲ್ಲ ತಾಂತ್ರಿಕ ಮಹಾವಿದ್ಯಾಲಯಗಳಲ್ಲಿ ವಿಟಿಯು ನಾವಿಣ್ಯತಾ ಕ್ಲಬ್ ಸ್ಥಾಪಿಸಲಾಗಿದೆ ಎಂದು ಹೇಳಿದರು.
ದೇಶದಲ್ಲೇ ಮಾದರಿ: ವಿಟಿಯು ಅಳವಡಿಸಿದ ಪರೀಕ್ಷಾ ವ್ಯವಸ್ಥಾಪನಾ ಪದ್ಧತಿ ದೇಶದಲ್ಲೇ ಮಾದರಿಯಾಗಿದೆ. ಅಂದಾಜು ಮೂರು ಲಕ್ಷ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಇದರ ಲಾಭ ಪಡೆದಿದ್ದಾರೆ.
ಅತ್ಯಂತ ನಾವೀಣ್ಯತೆಯಿಂದ ಕೂಡಿದ ಪರೀಕ್ಷಾ ವ್ಯವಸ್ಥಾಪನಾ ಪದ್ದತಿಯು ಅರ್ಧ ಗಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರಗಳಿಗೆ ನೇರವಾಗಿ ಪ್ರಶ್ನೆ ಪತ್ರಿಕೆಗಳನ್ನು ಕಳುಹಿಸುವುದು, ಉತ್ತರ ಪತ್ರಿಕೆಗಳ ಡಿಜಿಟಲ್ ಮೌಲ್ಯಮಾಪನ, ವಿದ್ಯಾರ್ಥಿಗಳು ಪ್ರವೇಶ ಪಡೆಯುವುದರಿಂದ ತಮ್ಮ ಕೋರ್ಸ್ ಮುಗಿಯುವರೆಗೆ ಎಲ್ಲ ಚಟುವಟಿಕೆಗಳನ್ನು ಗಣಕೀಕೃತಗೊಳಿಸಿರುವುದು, ಪಿಎಚ್ಡಿ ಪ್ರಬಂಧಗಳನ್ನು ಆನ್ಲೈನ್ ಮೂಲಕ ಮೌಲ್ಯಮಾಪನ ಮಾಡುವುದು, ಎಸ್ಎಂಎಸ್ ಮೂಲಕ ಫಲಿತಾಂಶಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸಲಾಗುಗುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕುಲಸಚಿವರಾದ ಡಾ.ಎಚ್. ಜಿ. ಶೇಖರಪ್ಪ, ಡಾ.ಕೆ.ಇ. ಪ್ರಕಾಶ ಮೊದಲಾದವರು ಇದ್ದರು.