ಬೆಳಗಾವಿ: ಕಾರ್ಮಿಕರ ಬೇಡಿಕೆ ಈಡೇರಿಸದೇ ಇರುವ ಹಿನ್ನೆಲೆಯಲ್ಲಿ ಹಿಂಡಾಲ್ಕೋ (ಇಂಡಾಲ್) ಕಂಪನಿಯ ನೌಕರರು ಮಂಗಳವಾರ ಆಗಸ್ಟ್ 5 ರಿಂದ ಸಾಮೂಹಿಕ ರಜೆ ಹಾಗೂ ಅನಿರ್ದಿಷ್ಟಾವಧಿ ಮುಷ್ಕರದ ಮೇಲೆ ತೆರಳಲು ನಿರ್ಧರಿಸಿದ್ದಾರೆ.
ಆಡಳಿತ ಮಂಡಳಿಯ ಹಠಮಾರಿ ಹಾಗೂ ಕಾರ್ಮಿಕ ವಿರೋಧಿ ಧೋರಣೆ ಹಾಗೂ ಕಂಪನಿಯಲ್ಲಿ ಖಾಯಂ ನೌಕರರ ಸಂಖ್ಯೆ ಕಡಿಮೆ ಮಾಡುತ್ತ ಗುತ್ತಿಗೆದಾರರಿಗೆ ಮನ್ನಣೆ ನೀಡುತ್ತಿರುವ ಹಿನ್ನೆಲೆಯಲ್ಲಿ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ.
ಆಡಳಿತ ಮಂಡಳಿಯ ಜೊತೆ ತಮ್ಮ ನ್ಯಾಯಬದ್ಧ ಬೇಡಿಕೆ ಈಡೇರಿಸುವಂತೆ ಹಲವಾರು ಬಾರಿ ಮನವಿ ಸಲ್ಲಿಸಿ, ಸಮಾಲೋಚನೆ ನಡೆಸಿದರೂ ಆಡಳಿತ ಮಂಡಳಿ ತನ್ನ ಮೊಂಡುತನ ಕೈಬಿಡದ ಹಿನ್ನೆಲೆಯಲ್ಲಿ ಉಪ ಕಾರ್ಮಿಕ ಆಯುಕ್ತರ ಸಮ್ಮುಖದಲ್ಲಿಯೂ ಚರ್ಚೆ ನಡೆಯಿತು. ಆದರೂ ಆಡಳಿತ ಮಂಡಳಿ ತನ್ನ ಪಟ್ಟು ಸಡಿಲಿಸಲಿಲ್ಲ.
ಈ ಹಿನ್ನೆಲೆಯಲ್ಲಿ ಹಿಂಡಾಲ್ಕೋ ಕಾರ್ಖಾನೆಯ ಎಲ್ಲ ಖಾಯಂ ನೌಕರರು ಮಂಗಳವಾರದಿಂದಲೇ ಅನಿರ್ದಿಷ್ಟಾವಧಿ ಮುಷ್ಕರದ ಮೇಲೆ ತೆರಳಲು ನಿರ್ಧರಿಸಿದ್ದಾರೆ.
ಈ ಕುರಿತಂತೆ ಈಗಾಗಲೇ ಕಾರ್ಖಾನೆಯ ಆಡಳಿತ ಮಂಡಳಿ, ಉಪ ಕಾರ್ಮಿಕ ಆಯುಕ್ತರು, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.
ಹಿಂಡಾಲ್ಕೋ ಕಂಪನಿಯು ಖಾಯಂ ಕಾರ್ಮಿಕರ ವೇತನ ಒಪ್ಪಂದದ ಬೇಡಿಕೆ ಪಟ್ಟಿಯನ್ನು ಕಳೆದ ವರ್ಷದ ಸೆಪ್ಟಂಬರ್ ತಿಂಗಳ 24 ರಂದೇ ಆಡಳಿತ ಮಂಡಳಿಗೆ ನೀಡಿದ್ದರೂ ಆಡಳಿತ ಮಂಡಳಿ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ.