-ಶ್ರೀಶೈಲ ಮಠದ
ಬೆಳಗಾವಿ: ರಾಜ್ಯ ಸರ್ಕಾರದ ಕ್ಷೀರಭಾಗ್ಯ ಯೋಜನೆಯಡಿ ಶಾಲೆಗಳಲ್ಲಿ ವಿತರಿಸುವ ಕೆನೆಭರಿತ ಹಾಲು ಕಂಡರೆ ಕೆಲ ಮಕ್ಕಳು ದೂರ ಓಡುತ್ತಾರೆ. ಅವರಿಗೆ ಹಾಲು ಕಂಡ್ರೆ ಅಲರ್ಜಿ!
ಬೆಳಗಾವಿ ಜಿಲ್ಲೆಯಲ್ಲಿ 1ರಿಂದ 10ನೇ ತರಗತಿವರೆಗೆ 5.81 ಲಕ್ಷ ಮಕ್ಕಳಿದ್ದಾರೆ. ಇವರ ಪೈಕಿ 41,483 ವಿದ್ಯಾರ್ಥಿಗಳು ಹಾಲು ಕುಡಿಯುವುದೇ ಇಲ್ಲ. ಒತ್ತಾಯದಿಂದಲೋ, ಉಳಿದ ಮಕ್ಕಳನ್ನು ನೋಡಿ ಕುಡಿದ ಮಕ್ಕಳು ಮರುಗಳಿಗೆಯಲ್ಲೇ ವಾಂತಿ ಮಾಡುತ್ತಾರೆ.
ರಕ್ತ ಬಲಹೀನತೆ, ಅಪೌಷ್ಟಿಕತೆಯಿಂದ ಮಕ್ಕಳು ಬಳಲಬಾರದು ಎಂಬ ಸದುದ್ದೇಶದಿಂದ ಸರ್ಕಾರ ಕಳೆದ ಆ.1ರಿಂದ ಕ್ಷೀರಭಾಗ್ಯ ಯೋಜನೆ ಜಾರಿಗೊಳಿಸಿದೆ. ಅಕ್ಷರ ದಾಸೋಹ ಯೋಜನೆಯಲ್ಲೇ ಮಕ್ಕಳಿಗೆ ಹಾಲು ವಿತರಿಸುತ್ತ ಬರಲಾಗಿದೆ. ಇದಕ್ಕಾಗಿ ಕೆನೆಭರಿತ ಹಾಲು ವಿತರಣೆಗೆ ಕೆಎಂಎಫ್ ಹಾಲಿನ ಪೌಡರ್ ವಿತರಿಸಿದೆ.
ಬಿಸಿಯೂಟ ತಯಾರಿಸುವ ಅಡುಗೆ ಸಿಬ್ಬಂದಿ ಜತೆಗೆ ಮುಖ್ಯೋಪಾಧ್ಯಾಯರು ಬೆಳಗ್ಗೆ ಈ ಹಾಲಿನ ಪೌಡರ್ ಅನ್ನು ಶುದ್ಧ ಕುಡಿಯುವ ನೀರಿನಲ್ಲಿ ಸಕ್ಕರೆ ಬೆರೆಸಿ ಸ್ವಾದಿಷ್ಟವಾದ ಕೆನೆ ಭರಿತ ಹಾಲು ಸಿದ್ಧಪಡಿಸಿ ಇಡುತ್ತಾರೆ. ಪ್ರತಿ ಮಗುವಿಗೆ 18 ಗ್ರಾಂ. ನಂತೆ ಅರ್ಧ ಕೆಜಿ ಪೊಟ್ಟಣದಲ್ಲಿ 55 ಮಕ್ಕಳಿಗೆ ಕುಡಿಯುವ ಹಾಲು ನೀಡಲಾಗುತ್ತದೆ. ಶಾಲಾ ಆರಂಭಕ್ಕೂ ಮುನ್ನ ಹಾಲು ಕುಡಿದು ಮಕ್ಕಳು ವಿದ್ಯಾರ್ಜನೆ ಆರಂಭಿಸುತ್ತಾರೆ. ಆದರೆ, ಬೆಳಗಾವಿಯಲ್ಲಿ ಹಾಲು ಕುಡಿಯದ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ.
ಅರಿವು ಮೂಡಿಸಿ: ಡಿಸಿ
ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಕ್ಷೀರಭಾಗ್ಯ ಯೋಜನೆ ಮಕ್ಕಳ ಪಾಲಿಗೆ ವರದಾನ. ಎಲ್ಲ ಮಕ್ಕಳಿಗೆ ಹಾಲು ಕುಡಿಯಲು ಉತ್ತೇಜನ ನೀಡಬೇಕು. ಹಾಲು ಪೌಷ್ಟಿಕ ಆಹಾರವಾಗಿದ್ದು ಸುಲಭವಾಗಿ ಪಚನವಾಗುತ್ತದೆ. ಈ ಕುರಿತು ಮಕ್ಕಳಲ್ಲಿ ತಿಳಿವಳಿಕೆ ಮೂಡಿಸಬೇಕು. ಪೋಷಕರಲ್ಲೂ ಅದರ ಬಗ್ಗೆ ಅರಿವು ಮೂಡಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎನ್. ಜಯರಾಂ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಲೆಕ್ಟೋಜಿನ್ ಡಿಫೀಷಿಯನ್ಸಿ
ಹಾಲು ಒಬ್ಬೊಬ್ಬರಿಗೆ ಆಗುವುದಿಲ್ಲ. ಲೆಕ್ಟೋಜಿನ್ ಡೆಫಿಶಿಯೆನ್ಸಿಯೇ ಇದಕ್ಕೆ ಕಾರಣ. ಹಾಲು ಕುಡಿಯುವುದರಿಂದ ಕೆಲ ಮಕ್ಕಳಲ್ಲಿ ವಾಂತಿ, ಭೇದಿ ಉಂಟಾಗುತ್ತದೆ. ಶೇ. 0.5ರಷ್ಟು ಮಕ್ಕಳಲ್ಲಿ ಮಾತ್ರ ಇಂಥ ಸಮಸ್ಯೆ ಇರುತ್ತದೆ. ಹಾಲನ್ನು ಕೆನೆಬರುವವರೆಗೆ ಕಾಯಿಸಿ ಮಕ್ಕಳಿಗೆ ಕೊಡುವುದರಿಂದ ಈ ಸಮಸ್ಯೆ ಉದ್ಭವಿಸುವುದಿಲ್ಲ. ಸಮಸ್ಯಾತ್ಮಕ ಮಕ್ಕಳಿಗೆ ಚುಚ್ಚುಮದ್ದು ನೀಡಿ ಸರಿಪಡಿಸಬಹುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಅಪ್ಪಾಸಾಬ ನರಟ್ಟಿ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
ಆಯಾ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ತಪಾಸಣೆ ಮಾಡುವ ಜತೆಗೆ ಹಾಲು ಕುಡಿವಂತೆ ಮಕ್ಕಳಲ್ಲಿ ಅರಿವು ಮೂಡಿಸಲಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಹಾಲಿನ ಸೇವನೆ ಬಗ್ಗೆ ತಪ್ಪು ಕಲ್ಪನೆಗಳೂ ಇವೆ. ಹಾಲಿನ ಪುಡಿಯಲ್ಲೇನೂ ಸಮಸ್ಯೆ ಇರಲಿಕ್ಕಿಲ್ಲ. ಇದ್ದರೆ ಎಲ್ಲ ಮಕ್ಕಳಿಗೂ ಇದೇ ಅನುಭವ ಆಗಬೇಕಿತ್ತು. ಇದು ಒಂದು ರೀತಿಯಲ್ಲಿ ಅಲರ್ಜಿ ಅಷ್ಟೆ.
-ಡಾ. ಅಪ್ಪಾಸಾಬ ನರಟ್ಟಿ, ಆರೋಗ್ಯಾಧಿಕಾರಿ