ಬೆಳಗಾವಿ: ಶಾಸಕ ಡಿ.ಬಿ.ಇನಾಂದಾರ ಅಧ್ಯಕ್ಷರಾಗಿರುವ ಬೈಲಹೊಂಗಲ ತಾಲೂಕಿನ ಎಂ.ಕೆ.ಹುಬ್ಬಳ್ಳಿ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯು ರೈತರಿಗೆ 35.51ಕೋಟಿ ಬಾಕಿ ನೀಡಲು ಸೋಮವಾರ ಕೊನೆ ದಿನವಾಗಿದೆ. ಮೂರು ದಿನಗಳ ಹಿಂದೆ ಬೈಲಹೊಂಗಲ ತಹಸೀಲ್ದಾರರು ಕಾರ್ಖಾನೆಗೆ ಬೀಗ ಜಡಿದು ಜಪ್ತಿ ಮಾಡಲು ಹೋದಾಗ ಜು.14ರ ವರೆಗೆ ಕಾಲಾವಕಾಶ ನೀಡುವಂತೆ ಕೇಳಿದ್ದಾರೆ. ಆ ಗಡುವು ಸೋಮವಾರಕ್ಕೆ ಮುಗಿಯಲಿದೆ. ಆದರೂ ಈವರೆಗೆ ಹಣ ಪಾವತಿಸಿಲ್ಲ. ಇದು ಜಿಲ್ಲಾಡಳಿತ ಮಲಪ್ರಭಾ ಶುಗರ್ಸ್‌ಗೆ ನೀಡಿದ ಕೊನೆ ಅವಕಾಶ. ಅಥಣಿ ಫಾರ್ಮರ್ಸ್- 9.68 ಕೋಟಿ, ರಾಮದುರ್ಗ ತಾಲೂಕಿನ ಶಿವಸಾಗರ ಶುಗರ್ಸ್-28.09 ಕೋಟಿ, ಗೋಕಾಕ ತಾಲೂಕಿನ ಘಟಪ್ರಭಾ ಶುಗರ್ಸ್-10.06 ಕೋಟಿ ಮತ್ತು ಅದೇ ತಾಲೂಕಿನ ಇನ್ನ್ನೊಂದು ಕಾರ್ಖಾನೆ ಸೌಭಾಗ್ಯಲಕ್ಷ್ಮಿ ಶುಗರ್ಸ್ 35.30 ಕೋಟಿ ಹಣವನ್ನು ರೈತರಿಗೆ ಪಾವತಿ ಮಾಡದೇ ಬಾಕಿ ಇಟ್ಟುಕೊಂಡಿವೆ ಎಂದು ಜಿಲ್ಲಾಧಿಕಾರಿ ಕಚೇರಿ ಮೂಲಗಳು ತಿಳಿಸಿವೆ.