ಕನ್ನಡಪ್ರಭ ವಾರ್ತೆ, ವಾಸ್ಕೋ, ಜು. 21
ಸೋಮವಾರ ಮತ್ತೆ ಇಲ್ಲಿನ ಬೈನಾ ಬೀಚಿನಲ್ಲಿ ಸಮುದ್ರದ ಅಲೆಗಳ ಉಬ್ಬರಕ್ಕಿಂತ ಜೆಸಿಬಿ ಅಬ್ಬರ ಹೆಚ್ಚಿತು. ಕನ್ನಡಿಗರ 8 ಮನೆಗಳನ್ನು ಬುಡಮೇಲು ಮಾಡಲಾಯಿತು. ಇದರಿಂದ ಬೈನಾದ ಬೀದಿಯಲ್ಲಿ ಕರ್ನಾಟಕ ಮೂಲದ ನಿರಾಶ್ರಿತರ ಸಂಖ್ಯೆ ಮತ್ತಷ್ಟು ಏರಿದೆ. ಇನ್ನಷ್ಟು ಮನೆಗಳ ಮೇಲೆ ತೂಗುಕತ್ತಿ ನೇತಾಡುತ್ತಲೇ ಇದೆ.
ಸೋಮವಾರ ಬೆಳಗ್ಗೆ ಹಠಾತ್ ಆಗಮಿಸಿದ ಅಧಿಕಾರಿಗಳು ಮನೆಯನ್ನು ತೆರವುಗೊಳಿಸುವಂತೆ ಕಟ್ಟಪ್ಪಣೆ ಮಾಡಿದರು. ಮನೆಯಿಂದ ಹೊರಬರಲು ನಿರಾಕರಿಸಿದ ಕೆಲವರನ್ನು ಹೊರಕ್ಕೆಳೆದರು. ಕೈಗೆ ಸಿಕ್ಕ ಸಾಮಗ್ರಿಗಳನ್ನು ಬಿಸಾಡಿದರು. ಕೆಲವೆ ಸಮಯದಲ್ಲಿ 8 ಮನೆಗಳ ಮೇಲೆ ಜೆಸಿಬಿ ಕಾರ್ಯಾಚರಣೆ ನಡೆಸಲಾಯಿತು. ನೋಡನೋಡುತ್ತಿದ್ದಂತೆ ಕನ್ನಡಿಗರ ಮನೆಗಳು ನೆಲಸಮವಾದವು. ಜು. 11ರಂದು ಬೈನಾದಲ್ಲಿ ಕನ್ನಡಿಗರ ಮನೆ ತೆರವು ಕಾರ್ಯಾಚರಣೆ ಆರಂಭವಾಗಿತ್ತು. ಯಮನಪ್ಪ ಲಮಾಣಿ ಎನ್ನುವವರು ಮುಂಬಯಿ ಹೈಕೋರ್ಟ್‌ನ ಗೋವಾ ಬೆಂಚ್‌ನಿಂದ ತಡೆಯಾಜ್ಞೆ ತಂದಿದ್ದರಿಂದ ತೆರವು ಕಾರ್ಯಾಚರಣೆ ಸ್ಥಗಿತಗೊಂಡಿತ್ತು. ಈ ನಡುವೆ ಯಮನಪ್ಪ ಲಮಾಣಿ ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯನ್ನು ಹಿಂದಕ್ಕೆ ಪಡೆದಿದ್ದರಿಂದ ಗೋವಾ ಸರ್ಕಾರದ ಮನೆ ತೆರವು ಕಾರ್ಯಾಚರಣೆಗೆ ಹಸಿರು ನಿಶಾನೆ ದೊರೆತಂತಾಗಿತ್ತು.
ಸೋಮವಾರ ಸುಮಾರು 1000ದಷ್ಟು ಪೊಲೀಸರು ಬೈನಾಕ್ಕೆ ಆಗಮಿಸಿ ಬಿಗಿಯಾದ ಬಂದೋಬಸ್ತ್ ಏರ್ಪಡಿಸಿದ್ದರು. ಅವರಲ್ಲಿ 500ರಷ್ಟು ಮಹಿಳಾ ಪೊಲೀಸರೂ ಇದ್ದರು. ಕನ್ನಡಿಗರು ಮನೆ ತೆರವು ಕಾರ್ಯಾಚರಣೆಗೆ ಪ್ರತಿರೋಧ ಒಡ್ಡಬಹುದೆಂಬ ಕಾರಣಕ್ಕೆ ಇಷ್ಟೊಂದು ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಮನೆ ಕೆಡವದಂತೆ ಮಹಿಳೆಯರು, ವೃದ್ಧರು, ಅಸಹಾಯಕರು ಅಂಗಲಾಚಿದರೂ, ಮನವಿ ಮಾಡಿದರೂ ಲೆಕ್ಕಿಸದೆ ನೆಲಸಮಗೊಳಿಸಲಾಯಿತು. ಬೈನಾ ನಿರಾಶ್ರಿತರ ಮುಖಂಡರು ಹಾಗೂ ಕನ್ನಡಿಗರಿಗೆ ನೆರವಿನ ಹಸ್ತ ಚಾಚಿದ್ದ ಸಿದ್ದಣ್ಣ ಮೇಟಿ ಮತ್ತಿತರರು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ಬೆಂಗಳೂರಿಗೆ ತೆರಳಿದ ಸಂದರ್ಭವನ್ನೇ ಬಳಸಿಕೊಂಡು ಮನೆಗಳನ್ನು ಉರುಳಿಸಲಾಗಿದೆ. ಮನೆ ಕಳೆದುಕೊಂಡವರಿಗೆ ಕಾಯಂ ಪುನರ್ವಸತಿ ಹಾಗೂ ಮತ್ತೆ ಮನೆ ತೆರವುಗೊಳಿಸದಂತೆ ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಅವರಿಗೆ ಪತ್ರ ಬರೆಯುವುದಾಗಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮನ್ನು ಭೇಟಿಯಾದ ಬೈನಾದ ನಿರಾಶ್ರಿತರ ನಿಯೋಗಕ್ಕೆ ಭರವಸೆ ನೀಡಿದ್ದರು. ಆದರೆ ಸಿದ್ದರಾಮಯ್ಯ ಅವರ ಪತ್ರ ಬರುವುದರೊಳಗೆ ಮತ್ತೆ 8 ಮನೆಗಳು ಉರುಳಿವೆ.
ಮತ್ತೊಂದು ಕಾರ್ಯಾಚರಣೆ ಜು. 29ರಂದು ನಡೆಯುವ ಸಾಧ್ಯತೆ ಇದೆ ಎಂದು ಕನ್ನಡಿಗರು ಆತಂಕ ವ್ಯಕ್ತಪಡಿಸಿದ್ದಾರೆ.